Sidlaghatta : ಶಿಡ್ಲಘಟ್ಟ ತಾಲ್ಲೂಕಿನಾಧ್ಯಂತ ಸಡಗರ ಸಂಭ್ರಮ ಹಾಗೂ ಭಕ್ತಿಭಾವದಿಂದ ಶ್ರೀರಾಮ ನವಮಿಯನ್ನು ಆಚರಿಸಲಾಯಿತು. ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿನ ದೇವಾಲಯಗಳಲ್ಲಿ ಶ್ರೀರಾಮ ನವಮಿಯ ಪ್ರಯುಕ್ತ ವಿಶೇಷ ಪೂಜೆ ಮಾಡಿ ಮಹಾ ಮಂಗಳಾರತಿ ನೆರವೇರಿಸಿ ತೀರ್ಥ ಪ್ರಸಾದವನ್ನು ವಿನಿಯೋಗಿಸಲಾಯಿತು.
ಮುಖ್ಯವಾಗಿ ಹೆಸರು ಬೇಳೆ ಹಾಗೂ ಪಾನಕವನ್ನು ಪ್ರಸಾದವನ್ನಾಗಿ ಎಲ್ಲ ಕಡೆಯೂ ಭಕ್ತರಿಗೆ ಹಂಚಲಾಯಿತು. ಭಕ್ತರು ದೊಡ್ಡ ದೊಡ್ಡ ಕೊಳಗಗಳ ತಂಬಾ ಹೆಸರು ಬೇಳೆ, ಬೆಲ್ಲದ ಪಾನಕ ಮಾಡಿಸಿ ದೇವಾಲಯಗಳ ಮುಂದಿರಿಸಿ ದೇವಾಲಯಕ್ಕೆ ಬರುವ ಹಾಗೂ ರಸ್ತೆಗಳಲ್ಲಿ ಸಾಗುವವರನ್ನು ಕರೆದು ಹಂಚಿದರು.
ಶ್ರೀರಾಮ, ಸೀತೆ, ಲಕ್ಷ್ಮಣ ಹಾಗು ಆಂಜನೇಯಸ್ವಾಮಿಗೆ ವಿಶೇಷ ಹೂವಿನ ಅಲಂಕಾರ ಮಾಡಿ ಪೂಜಿಸಿ ನಮಿಸಲಾಯಿತು. ಬಹುತೇಕ ರಾಮನ ದೇವಾಲಯಗಳು ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿದ್ದವು. ರಾಮನಾಮ ಜಪ ಮುಗಿಲು ಮುಟ್ಟಿತ್ತು.
ನಗರದ ಕೋಟೆ ಆಂಜನೇಯಸ್ವಾಮಿ, ಮಯೂರ ವೃತ್ತದ ಆಂಜನೇಯಸ್ವಾಮಿ, ಇದ್ಲೂಡು ಮಾರ್ಗದ ಗಾಂಧಿನಗರದಲ್ಲಿನ ಮುನೇಶ್ವರಸ್ವಾಮಿ, ಆಂಜನೇಯಸ್ವಾಮಿ ದೇವಾಲಯ, ಚಿಂತಾಮಣಿ ಮಾರ್ಗದ ವೀರಾಂಜನೇಯಸ್ವಾಮಿ, ಅಪ್ಪೇಗೌಡನಹಳ್ಳಿ ಗೇಟ್ ನ ಬಯಲಾಂಜನೇಯಸ್ವಾಮಿ, ಚೌಡಸಂದ್ರದ ಶ್ರೀಪ್ರಸನ್ನಾಂಜನೇಯಸ್ವಾಮಿ, ವೀರಾಪುರದ ವೀರಾಂಜನೇಯಸ್ವಾಮಿ, ತಿಮ್ಮನಾಯಕನಹಳ್ಳಿಯ ರಾಮನಗುಡಿ ಸೇರಿದಂತೆ ನಾನಾ ಕಡೆ ವಿಜೃಂಭಣೆಯಿಂದ ಶ್ರೀರಾಮನವಮಿಯನ್ನು ಆಚರಿಸಲಾಯಿತು.
ತಾಲ್ಲೂಕಿನ ಚೌಡಸಂದ್ರ ಗ್ರಾಮದ ವ್ಯಾಸರಾಯರ ಕಾಲದ ಸುಪ್ರಸಿದ್ಧ ಶ್ರೀ ಆಂಜನೇಯಸ್ವಾಮಿ ದೇವಾಲಯದಲ್ಲಿ ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಒಂದು ದಿನದ ಅಖಂಡ ರಾಮಕೋಟಿ ಏರ್ಪಡಿಸಲಾಗಿತ್ತು.
ಪೂಜಾ ಕೈಂಕರ್ಯಗಳನ್ನು ಕೈಗೊಂಡು ರಾಮಕೋಟಿ ರಾಮನಾಮವನ್ನು ಪಠಿಸಲು ಗ್ರಾಮ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಗಳ ಭಕ್ತಾದಿಗಳು ಭಾಗವಹಿಸಿದ್ದು, ಪಕ್ಕ ವಾದ್ಯ ಹಾಗು ಭಜನಾ ತಂಡದೊಂದಿಗೆ ರಾಮೋಟಿ ಭಜನೆ ಶ್ರದ್ಧಾಭಕ್ತಿಯಿಂದ ನಡೆಯಿತು.
94 ನೇ ವರ್ಷದ ಉಟ್ಲು ಪರಿಷೆ
ಚಿಂತಾಮಣಿ ರಸ್ತೆಯಲ್ಲಿರುವ ಶ್ರೀವೀರಾಂಜನೇಯ ದೇವಾಲಯದಲ್ಲಿ ಶ್ರೀ ವೀರಾಂಜನೇಯಸ್ವಾಮಿ ಬಲಿಜ ಸೇವಾ ಟ್ರಸ್ಟ್ ವತಿಯಿಂದ 94 ನೇ ವರ್ಷದ ಉಟ್ಲು ಪರಿಷೆ ವಿಶೇಷವಾಗಿ ಜನಾಕರ್ಷಣೆಗೆ ಪಾತ್ರವಾಗಿತ್ತು. ಹಾಲನ್ನು ಮಡಿಕೆಯಲ್ಲಿ ಕಟ್ಟಿ ಪೂಜಿಸಿ ಒಡೆಯುತ್ತಾರೆ. ನಂತರ ನಡೆಯುವ ಮನರಂಜನಾ ಉಟ್ಲು ಜನಾಕರ್ಷಣೆಯ ಕೇಂದ್ರ ಬಿಂದು. ಎತ್ತರದ ಕಂಬದ ಮೇಲೆ ಕಬ್ಬಿಣದಲ್ಲಿ ಮಾಡಿರುವ ತಿರುಗುಮಣೆ ಇರುತ್ತದೆ. ಅದಕ್ಕೆ ನಾಲ್ಕು ಹಗ್ಗಗಳನ್ನು ಕಟ್ಟಿರುತ್ತಾರೆ. ಹಗ್ಗದ ತುದಿಯಲ್ಲಿ ತೆಂಗಿನಕಾಯಿ ಕಟ್ಟಿರುತ್ತಾರೆ. ತಿರುಗುಮಣೆಯಲ್ಲಿ ಇಬ್ಬರು ಕುಳಿತು ತಿರುಗಿಸುತ್ತಿದ್ದಂತೆಯೇ ತೆಂಗಿನಕಾಯಿ ಕಟ್ಟಿರುವ ಹಗ್ಗವೂ ಸುತ್ತತೊಡಗುತ್ತವೆ. ಉದ್ದುದ್ದ ಕೋಲು ಹಿಡಿದು ಈ ಕೆಲವರು ತೆಂಗಿನಕಾಯಿಯನ್ನು ಹೊಡೆಯಲು ನಿಂತಿರುತ್ತಾರೆ. ಅವರು ತೆಂಗಿನಕಾಯಿಗೆ ಹೊಡೆಯದಂತೆ ಅವರೆಡೆಗೆ ಸುತ್ತಲಿಂದ ನೀರನ್ನು ಎರಚುತ್ತಿರುತ್ತಾರೆ. ಈ ಆಟ ನೋಡುವ ಜನ ಹೊಡೆಯಲು ಕೂಗುತ್ತಾ ಹುರಿದುಂಬಿಸುತ್ತಾರೆ. ತೆಂಗಿನ ಕಾಯಿ ಹೊಡೆದ ವೀರನಿಗೆ ಹಾರಹಾಕಿ ದೇವಾಲಯದಲ್ಲಿ ಸನ್ಮಾನಿಸುವರು.