Sidlaghatta : ಶ್ರೀರಾಮನ ಜನ್ಮ ಭೂಮಿ ಅಯೋಧ್ಯೆಯಲ್ಲಿ ಜ.22 ರಂದು ಶ್ರೀರಾಮ ಮಂದಿರ ಲೋಕಾರ್ಪಣೆಗೊಳ್ಳಲಿದ್ದು ಕಾರ್ಯಕ್ರಮಕ್ಕೆ ಭಕ್ತರನ್ನು ಆಹ್ವಾನಿಸುವ ಪವಿತ್ರ ಮಂತ್ರಾಕ್ಷತೆಯೊಂದಿಗೆ ರಥ ಯಾತ್ರೆಯು ಶಿಡ್ಲಘಟ್ಟಕ್ಕೆ ಭಾನುವಾರ ಆಗಮಿಸಿತ್ತು. ನಗರದಲ್ಲಿನ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿ ರಾಮನ ಭಕ್ತರು ರಥವನ್ನು ಸಡಗರ ಸಂಭ್ರಮದಿಂದ ಬರ ಮಾಡಿಕೊಂಡರು.
ನಗರದ ಬಸ್ ನಿಲ್ದಾಣದಲ್ಲಿ ಭಕ್ತಿಪೂರ್ವಕವಾಗಿ ಸ್ವಾಗತಿಸಿದ ಶ್ರೀರಾಮನ ಭಕ್ತರು, ಬಿಜೆಪಿ ಕಾರ್ಯಕರ್ತರು, ಭಜರಂಗದಳ ಕಾರ್ಯಕರ್ತರು, ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಶ್ರೀರಾಮ ಮತ್ತು ಹನುಮಂತನ ಘೋಷಣೆಗಳೊಂದಿಗೆ ನಗರದಲ್ಲಿ ಮೆರವಣಿಗೆ ನಡೆಸಿದರು.
ಈ ವೇಳೆ ಮಾತನಾಡಿದ ಬಿಜೆಪಿ ಮುಖಂಡ ಸೀಕಲ್ ರಾಮಚಂದ್ರಗೌಡ, ಇಡೀ ಜಗತ್ತು ಕಾತುರದಿಂದ ಕಾಯುತ್ತಿರುವ ಶ್ರೀರಾಮನ ಜನ್ಮ ಭೂಮಿ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರವು ಮುಂದಿನ ಜ.22 ರಂದು ಲೋಕಾರ್ಪಣೆಗೊಳ್ಳಲಿದ್ದು ಅಂದು ನಾವೆಲ್ಲರೂ ನಮ್ಮ ನಮ್ಮ ಊರಲ್ಲಿನ ದೇವಾಲಯಗಳಲ್ಲಿ ಪೂಜೆ ಸಲ್ಲಿಸಬೇಕೆಂದರು.
ಅಂದು ಬೆಳಗ್ಗೆ 11 ಗಂಟೆಗೆ ಸರಿಯಾಗಿ ಅಯ್ಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ನಡೆಯಲಿದ್ದು ಅ ಸಮಯಕ್ಕೆ ಸರಿಯಾಗಿ ನಾವು ನಮ್ಮ ನಮ್ಮ ಊರಲ್ಲಿನ ದೇವಾಲಯಗಳಲ್ಲಿ ಪೂಜೆ ಸಲ್ಲಿಸೋಣ, 12 ಗಂಟೆಗೆ ಮಹಾ ಮಂಗಳಾರತಿ ಮಾಡಿ ಪೂಜೆ ಸಲ್ಲಿಸಿ ತೀರ್ಥ ಪ್ರಸಾದ ವಿನಿಯೋಗಿಸೋಣ ಎಂದರು.
ಸಂಜೆ ಉತ್ತರ ದಕ್ಕಿಗೆ ಆರತಿ ಮಾಡುವ ಮೂಲಕ ಅಯ್ಯೋಧ್ಯೆಯ ಶ್ರೀರಾಮ ಮಂದಿರ ಲೋಕಾರ್ಪಣೆಯ ಕಾರ್ಯದಲ್ಲಿ ಕೈ ಜೋಡಿಸುವಂತ ಪುಣ್ಯದ ಕಾರ್ಯ ನಡೆಸೋಣ ಎಂದು ನೆರೆದಿದ್ದ ಭಕ್ತರಲ್ಲಿ ಮನವಿ ಮಾಡಿದರು. ಆಹ್ವಾನ ಪತ್ರಿಕೆ ಮತ್ತು ಪವಿತ್ರ ಮಂತ್ರಾಕ್ಷತೆಯನ್ನು ತಾಲ್ಲೂಕಿನ ಪ್ರತಿ ಮನೆಗೂ ತಲುಪಿಸಲಾಗುವುದು ಎಂದು ವಿವರಿಸಿದರು.
ಅಯ್ಯೋಧ್ಯೆಯಿಂದ ರಥದಲ್ಲಿ ತಂದಿದ್ದ ಪವಿತ್ರ ಮಂತ್ರಾಕ್ಷತೆ ಹಾಗೂ ಆಹ್ವಾನ ಪತ್ರಿಕೆಗಳನ್ನು ಹಂಚಲಾಯಿತು. ರಥಕ್ಕೆ ಪೂಜೆ ಸಲ್ಲಿಸಿ ದವಸ ದಾನ್ಯವನ್ನು ದಾನ ಮಾಡಲಾಯಿತು. ಮಾಜಿ ಶಾಸಕ ಎಂ.ರಾಜಣ್ಣ, ಸೀಕಲ್ ಆನಂದಗೌಡ, ಕನಕಪ್ರಸಾದ್, ವೆಂಕಟೇಶ್, ನಗರಸಭೆ ಅನಿಲ್ ಕುಮಾರ್, ಮಂಜುನಾಥ್, ಫುಡ್ ಮನೋಹರ್, ಬಿ.ಕೆ.ವೇಣು, ಡಾ.ಡಿ.ಟಿ.ಸತ್ಯನಾರಾಯಣರಾವ್, ಭರತ್, ಸಾಯೀಶ್, ರೂಪಸಿ ರಮೇಶ್, ಲಕ್ಷ್ಮಿರೂಪಸಿ, ತ್ರಿವೇಣಿ, ಸಂಧ್ಯ ಹಾಜರಿದ್ದರು.