Belluti, Sidlaghatta : ವಿಜ್ಞಾನ ಮತ್ತು ಅಧ್ಯಾತ್ಮ ನಾಣ್ಯದ ಎರಡು ಮುಖಗಳಂತೆ. ಈ ಎರಡಕ್ಕೂ ಅವಿನಾಭಾವ ಸಂಬಂಧವಿದೆ. ಇವೆರಡೂ ಜ್ಞಾನ ಶಾಖೆಗಳು ಮಾನವನನ್ನು ಪ್ರತಿಭಾನ್ವಿತ ಮತ್ತು ಜ್ಞಾನ ಸಂಪನ್ನನಾನಿ ಮಾಡುತ್ತವೆ ಎಂದು ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷ ಶ್ರೀನಿರ್ಮಲಾನಂದನಾಥ ಮಹಾಸ್ವಾಮಿ ತಿಳಿಸಿದರು.
ಶಿಡ್ಲಘಟ್ಟ-ಜಂಗಮಕೋಟೆ ಮಾರ್ಗದ ಬೆಳ್ಳೂಟಿ ಗೇಟ್‌ನಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಲಕ್ಷ್ಮೀ ವೆಂಕಟೇಶ್ವರಸ್ವಾಮಿ ದೇವಾಲಯ ವೈಕುಂಠ ಕ್ಷೇತ್ರದ ಮಹಾಕುಂಭಾಭಿಷೇಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿ ಅವರು ಮಾತನಾಡಿದರು.
ಮಾನವನನ್ನು ದುಃಸ್ಥಿತಿಯಿಂದ ಧನ್ಯತೆಯ ಸ್ಥಿತಿಗೆ, ಅಸಹಾಯಕ ಪರಿಸ್ಥಿತಿಯಿಂದ ಸ್ವಾತಂತ್ರ್ಯ ನಿರ್ಭೀತಿಗಳ ಸ್ಥಿತಿಗೆ ಒಯ್ಯುವುದೇ ಅಧ್ಯಾತ್ಮ ಮತ್ತು ವಿಜ್ಞಾನದ ಗುರಿ. ಈ ಜಗತ್ತಿನಲ್ಲಿ ವಿಜ್ಞಾನದಿಂದ ಸಾಕಷ್ಟು ಬದಲಾಗಿದೆ. ಪ್ರಗತಿಯೂ ಆಗಿದೆ. ಅಗಾಧವಾದ ಆವಿಷ್ಕಾರಗಳು ಆಗಿವೆ. ಆ ಎಲ್ಲವುಗಳನ್ನು ಸದುಪಯೋಗಪಡಿಸಿಕೊಳ್ಳುವ ಜ್ಞಾನ ನೀಡಿವುದು ಆಧ್ಯಾತ್ಮಿಕತೆ, ಸಂಸ್ಕಾರವಾಗಿದೆ ಎಂದು ಹೇಳಿದರು.
ವಿಜ್ಞಾನವನ್ನು ಈ ಸಮಾಜದ, ನಮ್ಮ ಬದುಕಿನ ಉದ್ದಾರಕ್ಕೂ ಬಳಸಬಹುದು, ವಿನಾಶಕ್ಕೂ ಬಳಸಬಹುದು. ಹಾಗಾಗಿ ನಾವು ನಮ್ಮ ಮಕ್ಕಳಿಗೆ ಈ ವಿಜ್ಞಾನವನ್ನು ಸದುಪಯೋಗ ಪಡಿಸಿಕೊಳ್ಳುವುದನ್ನು ಹೇಳಿಕೊಡುವ ಕೆಲಸ ಆಗಬೇಕಿದೆ ಎಂದು ತಿಳಿಸಿದರು.
ಪ್ರತಿ ಗ್ರಾಮದಲ್ಲೂ ನಮ್ಮ ಹಿರಿಯರು ಅರಳಿಕಟ್ಟೆಯನ್ನು ನಿರ್ಮಿಸಿ ತಮ್ಮ ಮಕ್ಕಳನ್ನು ಅಲ್ಲಿಗೆ ಹಬ್ಬ ಹರಿದಿನಗಳಂದು ಕರೆದೊಯ್ದು ಪೂಜೆ ಸಲ್ಲಿಸುತ್ತಿದ್ದರ ಹಿಂದೆಯೂ ವೈಜ್ಞಾನಿಕ ನಿಲುವು ಇದೆ. ಅರಳಿಮರವು ಹೆಚ್ಚು ಆಮ್ಲಜನಕವನ್ನು ಹೊರಸೂಸುತ್ತದೆ. ಅದು ಆರೋಗ್ಯಕರ ಎಂದು ಅರಳಿಕಟ್ಟೆ ಬಳಿ ಹೆಚ್ಚು ಕಾಲಕಳೆಯುತ್ತಿದ್ದರು. ಆದರೆ ಇಂದು ಅರಳಿಕಟ್ಟೆಗಳು ಮಾಯವಾಗುತ್ತಿದ್ದು ಅದಕ್ಕೆ ನಾವೇ ಕಾರಣವಾಗಿದ್ದೇವೆ.
ಹೆಣ್ಣು ಮಕ್ಕಳು ತಮ್ಮ ಸಂಸಾರದಲ್ಲಿ ಬರುವ ಸಣ್ಣ ಪುಟ್ಟು ಮನಸ್ತಾಪಗಳನ್ನು ಬಗೆಹರಿಸಿಕೊಳ್ಳಿ. ಗಂಡ ಹೆಂಡತಿ ನಡುವೆ “ಅಹಂ” ಬಂದಾಗಲೆ ಸಾಕಷ್ಟು ಸಂಸಾರಗಳು ಹಾಳಾಗುತ್ತವೆ. ಪ್ರೀತಿಯಿಂದ ತವರು ಮನೆಗೆ ಅಪರೂಪಕ್ಕೆ ಹೋಗಿ ಬನ್ನಿ, ಸಣ್ಣ ಪುಟ್ಟ ಗಲಾಟೆ ಮಾಡಿಕೊಂಡು ತವರು ಮನೆಗೆ ಹೋಗಿ ಇನ್ನಷ್ಟು ಸಮಸ್ಯೆಯನ್ನು ಮಾಡಿಕೊಳ್ಳಬೇಡಿ ಎಂದು ಕಿವಿ ಮಾತನ್ನು ಹೇಳಿದರು.
ಉಳ್ಳವರು ಬೇಕಾದರೆ ಮಾಡಿಕೊಳ್ಳಲಿ ಇಲ್ಲದವರು ಪ್ರತಿಷ್ಠೆಗೋಸ್ಕರ ಸಾಲ ಸೋಲ ಮಾಡಿ ಅದ್ದೂರಿ ಮದುವೆಗಳನ್ನು ಮಾಡಿ ಸಾಲದ ಸುಳಿಗೆ ಸಿಲುಕಬೇಡಿ, ಮದುವೆಗೆ ಮಾಡುವ ಖರ್ಚನ್ನು ನಿಮ್ಮ ಮಗಳ ಹೆಸರಲ್ಲಿ ಬ್ಯಾಂಕಿನಲ್ಲಿಡಿ. ಭವಿಷ್ಯದಲ್ಲಿ ಅದು ನೆರವಿಗೆ ಬರುತ್ತದೆ. ನಮ್ಮ ಮಠದಲ್ಲಿ ಸರಳವಾಗಿ ಮದುವೆ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತೇವೆ. ಅಲ್ಲಿ ಮದುವೆ ಮಾಡಿಕೊಳ್ಳಿ ಎಂದು ವಿವರಿಸಿದರು.
ದೇವಾಲಯದಲ್ಲಿ ನಡೆದ ಪೂಜಾ ಕಾರ್ಯಕ್ರಮದಲ್ಲಿ ಶ್ರೀಗಳು ಭಾಗವಹಿಸಿದ್ದರು. ಶ್ರೀಲಕ್ಷ್ಮೀವೆಂಕಟೇಶ್ವರಸ್ವಾಮಿ ಚಾರಿಟಬಲ್ ಟ್ರಸ್ಟ್‌ನ ಅಧ್ಯಕ್ಷ ಬೂದಾಳ ರವೀಂದ್ರನಾಥ್ ಹಾಗೂ ಕುಟುಂಬದವರು ಶ್ರೀಗಳಿಗೆ ಪಾದ ಪೂಜೆ ನೆರವೇರಿಸಿದರು.
ಶಾಸಕ ಬಿ.ಎನ್.ರವಿಕುಮಾರ್, ಡಾ.ಸತ್ಯನಾರಾಯಣರಾವ್, ವಕೀಲ ಎಂ.ಪಾಪಿರೆಡ್ಡಿ, ಒಕ್ಕಲಿಗರ ಸಂಘದ ಅಧ್ಯಕ್ಷ ಬಿ.ನಾರಾಯಣಸ್ವಾಮಿ, ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ, ತಾದೂರು ರಘು, ಮುನಿಕೆಂಪಣ್ಣ, ಮಸ್ತೇನಹಳ್ಳಿ ಕೃಷ್ಣಪ್ಪ, ಬೂದಾಳ ರವೀಂದ್ರ, ನವೀನ್, ಕಿರಣ್, ಭಕ್ತರು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.