ಕೊರೊನಾ ಅಬ್ಬರದಿಂದಾಗಿ, ಅದನ್ನು ತಡೆಗಟ್ಟಲು ಲಾಕ್ ಡೌನ್ ಘೋಷಣೆ ಮಾಡಿರುವುದರಿಂದ ಆರ್ಥಿಕವಾಗಿ ಬಹುತೇಕರ ಸ್ಥಿತಿ ಹದಗೆಟ್ಟಿದೆ. ಜನಸಾಮಾನ್ಯರು ಹಸಿವಿನಿಂದ ಬಳಲಬಾರದೆಂಬ ಸದುದ್ದೇಶದಿಂದ ಎಸ್.ಎನ್.ಕ್ರಿಯಾ ಟಸ್ಟ್ ವತಿಯಿಂದ ಅಳಿಲು ಸೇವೆಯಾಗಿ ನಗರದಲ್ಲಿ ಪ್ರತಿ ಕುಟುಂಬಕ್ಕೆ ಆಹಾರ ಪದಾರ್ಥಗಳ ಕಿಟ್ ವಿತರಣೆ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲ ತಾಲ್ಲೂಕಿನಾದ್ಯಂತ ಪ್ರತಿ ಕುಟುಂಬಗಳಿಗೆ ಆಹಾರ ಪದಾರ್ಥಗಳ ಕಿಟ್ ವಿತರಣೆ ಮಾಡುವ ಉದ್ದೇಶ ಹೊಂದಿದ್ದೇವೆ ಎಂದು ಕಾಂಗ್ರೆಸ್ ಮುಖಂಡ ಹಾಗೂ ಎಸ್.ಎನ್.ಕ್ರಿಯಾ ಟ್ರಸ್ಟ್ ನ ಅಧ್ಯಕ್ಷ ಆಂಜಿನಪ್ಪ ಪುಟ್ಟು ತಿಳಿಸಿದರು.
ನಗರದ ಹೊರ ವಲಯದ ಹಂಡಿಗನಾಳ ಗ್ರಾಮದ ಬಾಲಾಜಿ ಕನ್ವೆನ್ಷನ್ ಹಾಲ್ ಆವರಣದಲ್ಲಿ ನಗರದಲ್ಲಿನ 10 ಸಾವಿರ ಕುಟುಂಬಗಳಿಗೆ ದಿನಸಿ ಕಿಟ್ ವಿತರಣೆ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕೊರೊನಾ ಎರಡನೇ ಅಲೆಯ ಅಬ್ಬರಕ್ಕೆ ಅನೇಕ ಉದ್ದಿಮೆಗಳು, ಆಟೋ ಚಾಲಕರು, ಬೀದಿ ಬದಿ ವ್ಯಾಪಾರಿಗಳು, ಬೇಕರಿ, ಬಟ್ಟೆ, ಚಪ್ಪಲಿ ಅಂಗಡಿಗಳವರು, ದಿನಗೂಲಿಗೆ ಹೋಗುವವರು, ಹೀಗೆ ಅನೇಕರು ತೊಂದರೆಗೊಳಗಾಗಿದ್ದಾರೆ. ಸಾಧ್ಯವಾದಷ್ಟೂ ಜನರ ನೋವಿಗೆ ಸ್ಪಂದಿಸುವುದು, ನೆರವಾಗುವುದು, ಕಷ್ಟದಲ್ಲಿ ನಿಮ್ಮ ಜೊತೆಗೆ ನಾವಿದ್ದೇವೆ ಎಂಬ ಭಾವ ಮೂಡಿಸುವ ಸದುದ್ದೇಶದಿಂದ ನಗರದ ಪ್ರತಿಯೊಂದು ಕುಟುಂಬಕ್ಕೂ ಆಹಾರ ಪದಾರ್ಥಗಳ ಕಿಟ್ ನೀಡುತ್ತಿರುವುದಾಗಿ ಅವರು ಹೇಳಿದರು.
ಈ ಸಂದರ್ಭದಲ್ಲಿ ಬಾಲಾಜಿ ಕಲ್ಯಾಣ ಮಂಟಪದ ರಾಮಣ್ಣ, ಆನೂರು ದೇವರಾಜು, ಕೆಪಿಸಿಸಿ ಸದಸ್ಯ ನಾರಾಯಣಸ್ವಾಮಿ ಬಂಗಾರಪ್ಪ, ನಗರ ಸಭೆ ಸದಸ್ಯ ಶಬೀರ್, ಮಳಮಾಚನಹಳ್ಳಿ ಮುನಿರಾಜು, ಶಿವಕುಮಾರ್, ಆನಂದ್, ಚಂದ್ರಣ್ಣ , ಶಾಂತಕುಮಾರ್, ಚಲಪತಿ, ಪದ್ಮನಾಬ್, ಶರತ್, ಆಂಜಿನಪ್ಪ, ಜಮೀರ್, ಬಾಬು ಹುಸೇನ್, ಮುಜ್ಜೂ, ಖಾದಿರ್, ನೂರುಲ್ಲಾ, ಅಂಬಾರಿ ಮಂಜುನಾಥ್, ಮದನ್ ಹಾಜರಿದ್ದರು.