Malamachanahalli, Sidlaghatta : ಮಾದಕ ವಸ್ತುಗಳ ಸೇವನೆಯಿಂದ ವ್ಯಕ್ತಿಯು ದೈಹಿಕ ಹಾಗೂ ಮಾನಸಿಕ ಕಾಯಿಲೆಗೆ ತುತ್ತಾಗುವ ಜೊತೆಗೆ ಆರ್ಥಿಕವಾಗಿ ದಿವಾಳಿಯಾಗಿ ಪ್ರಾಣವನ್ನು ಕಳೆದುಕೊಳ್ಳುತ್ತಾನೆ. ಇದರಿಂದ ಅವನನ್ನೇ ನಂಬಿದ್ದ ಕುಟುಂಬ ಬೀದಿ ಪಾಲಾಗುತ್ತದೆ ಎಂದು ಜನಜಾಗೃತಿ ವೇದಿಕೆ ಸದಸ್ಯ ಎ.ಎಂ.ತ್ಯಾಗರಾಜ್ ಹೇಳಿದರು.
ಶಿಡ್ಲಘಟ್ಟ ತಾಲ್ಲೂಕಿನ ಮಳಮಾಚನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹಮ್ಮಿಕೊಂಡಿದ್ದ ಸ್ವಾಸ್ಥ್ಯಸಂಕಲ್ಪ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಬೀಡಿ, ಸಿಗರೇಟ್, ಮಧ್ಯಪಾನ ಸೇರಿದಂತೆ ಮಾದಕ ವಸ್ತುಗಳ ಸೇವನೆ ಬರಿ ವ್ಯಕ್ತಿಯೋರ್ವನ ಆರೋಗ್ಯದ ಮೇಲೆ ಪರಿಣಾಮ ಬೀರುವುದಿಲ್ಲ ಇದು ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ವಿದ್ಯಾರ್ಥಿಗಳು ಮಾದಕ ವಸ್ತುಗಳ ಮುಕ್ತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು. ಒಳ್ಳೆಯ ಸ್ನೇಹಿತರ ಗೆಳೆತನ ಮಾಡಬೇಕು, ಕಾರಣ ಏನೆಂದರೆ ಕೆಟ್ಟ ಅಭ್ಯಾಸಗಳು ಶುರುವಾಗುವುದೇ ಕೆಟ್ಟ ಸ್ನೇಹಿತರಿಂದ ಹಾಗಾಗಿ ಓದುವ ಸಮಯದಲ್ಲಿ ಒಳ್ಳೆಯ ಗೆಳೆಯರ ಸಹವಾಸ ಮಾಡಿ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ನಿರ್ದೇಶಕ ಪ್ರಶಾಂತ್ ಮಾತನಾಡಿ, ಪೂಜ್ಯ ಡಾ.ಡಿ.ವೀರೇಂದ್ರಹೆಗ್ಗಡೆ ಯವರು ಗ್ರಾಮಾಭಿವೃದ್ದಿ ಯೋಜನೆಯಡಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಅದರಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವು ಒಂದಾಗಿದೆ. ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಹೆತ್ತ ತಾಯಿ ತಂದೆಯನ್ನು ಪೋಷಿಸುವ ಜೊತೆಗೆ ಉತ್ತಮ ಪ್ರಜೆಯಾಗಿ ರೂಪುಗೊಳ್ಳಬೇಕು. ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗಬಾರದು ಎಂದರು.
ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಹಿತ್ತಲಹಳ್ಳಿ ಸುರೇಶ್, ತಾಲ್ಲೂಕು ಯೋಜನಾಧಿಕಾರಿ ಸುರೇಶ್‌ಗೌಡ, ಶಾಲಾ ಶಿಕ್ಷಕರಾದ ಬೈರರೆಡ್ಡಿ, ಮಮತಾ, ಸೇವಾ ಪ್ರತಿನಿಧಿ ನೇತ್ರಾವತಿ, ಚೈತ್ರಾ ವಲಯ ಮೇಲ್ವಿಚಾರಕ ಭೂತಯ್ಯ ಹಾಜರಿದ್ದರು.