ಭವಿಷ್ಯದ ದೃಷ್ಟಿಯಿಂದ ಗಿಡ ಮರಗಳನ್ನು ಬೆಳೆಸುವ ಯೋಚನೆ ಮಾಡದಿದ್ದಲ್ಲಿ ಮುಂದಕ್ಕೆ ಪಶ್ಚಾತ್ತಾಪ ಪಡಬೇಕಾದೀತು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲ್ಲೂಕು ಯೋಜನಾಧಿಕಾರಿ ಪ್ರಕಾಶ್ ಕುಮಾರ್ ಅಭಿಪ್ರಾಯಪಟ್ಟರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಭಕ್ತರಹಳ್ಳಿ ಗ್ರಾಮ ಪಂಚಾಯತ್ ವತಿಯಿಂದ ಶಿಡ್ಲಘಟ್ಟ ತಾಲ್ಲೂಕಿನ ಭಕ್ತರಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಆಯೋಜಿಸಲಾಗಿದ್ದ ಪರಿಸರ ಮಾಹಿತಿ ಹಾಗೂ ಗಿಡ ನೆಡುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೊರೋನಾ ಮಹಾಮಾರಿಯಿಂದ ಇಡೀ ಜಗತ್ತೇ ತಲ್ಲಣಗೊಂಡಿದ್ದು ಜನಜೀವನ ಸ್ಥಬ್ದವಾಗಿದೆ. ಅತೀ ಹೆಚ್ಚು ಮಂದಿ ಕೋವಿಡ್ ಸೋಂಕಿತರು ಆಮ್ಲಜನಕದ ಕೊರತೆಯಿಂದ ಮರಣ ಹೊಂದಿದ್ದನ್ನು ನಾವು ಕಂಡಿದ್ದೇವೆ. ಇಂತಹ ಪರಿಸ್ಥಿತಿಯಲ್ಲಿ ಸಮಾಜದ ಭವಿಷ್ಯದ ದೃಷ್ಟಿಯಿಂದ ಗಿಡ ಮರಗಳನ್ನು ಬೆಳೆಸುವ ಯೋಚನೆ ಮಾಡದಿದ್ದಲ್ಲಿ ಭವಿಷ್ಯತ್ತಿನಲ್ಲಿ ಪಶ್ಚಾತ್ತಾಪ ಪಡಬೇಕಾದೀತು. ಈ ನಿಟ್ಟಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ರಾಜ್ಯದಾದ್ಯಂತ ಪರಿಸರವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಜಾಗೃತಿ ಹಾಗೂ ಗಿಡ ನೆಡುವ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.
ಗ್ರಾಮ ಪಂಚಾಯತ್ ಪಿಡಿಓ ಪವಿತ್ರಾ ಶ್ರೀಧರ್ ಮಾತನಾಡಿ ಕೇವಲ ಗಿಡ ನೆಡುವುದು ಮಾತ್ರವಲ್ಲದೇ ಅದನ್ನು ಫೋಷಣೆ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ. ಕಾಲ ಕಾಲಕ್ಕೆ ಸರಿಯಾಗಿ ಮಳೆ ಬೆಳೆ ಬರಬೇಕಾದರೆ ಪರಿಸರವನ್ನು ಉಳಿಸುವ ಕೆಲಸ ನಮ್ಮಿಂದಾಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಲಲಿತಮ್ಮ, ಉಪಾಧ್ಯಕ್ಷರಾದ ಕಲ್ಪನಾ, ಸದಸ್ಯರಾದ ಮಂಜುನಾಥ್, ಚಿದಾನಂದ ಮೂರ್ತಿ, ಚಿನ್ನಮ್ಮ, ಜಯರಾಮ್, ವೆಂಕಟೇಶ್ ಜೇಸಿ ಅಧ್ಯಕ್ಷರಾದ ಜಯರಾಮಪ್ಪ, ಕೇಶವ ಮೂರ್ತಿ, ಒಕ್ಕೂಟದ ಅಧ್ಯಕ್ಷರಾದ ಪಾರಿಜಾತ ಮೇಲ್ವಿಚಾರಕರಾದ ಅನಿತಾ ನೇತ್ರಾ ಸೇವಾಪ್ರತಿನಿಧಿ ಗಗನಾ ಉಪಸ್ಥಿತರಿದ್ದರು.