ಕೊರೊನಾ ಎರಡನೇ ಅಲೆಯ ಈ ಸಂದರ್ಭದಲ್ಲಿ ಅಂಗವಿಕಲರು ಹಾಗೂ ವೃದ್ಧರು ಸೇವಾಕೇಂದ್ರಕ್ಕೆ ಬಂದು ಹಣ ಪಡೆಯಲು ತೊಂದರೆಯಾಗಿರುವುದರಿಂದ ಪೂಜ್ಯರ ಆದೇಶದ ಮೇರೆಗೆ ಫಲಾನುಭವಿಗೆ ಕಾರ್ಯಕರ್ತರ ಮೂಲಕ ಮಾಶಾಸನ ವಿತರಿಸುತ್ತಿದ್ದು ಈವರೆಗೂ 160 ಮಂದಿಗೆ ಮಾಶಾಸನ ವಿತರಿಸಲಾಗಿದೆ ಎಂದು ತಾಲ್ಲೂಕು ಯೋಜನಾಧಿಕಾರಿ ಪ್ರಕಾಶ್ ಕುಮಾರ್ ತಿಳಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಶಿಡ್ಲಘಟ್ಟ ತಾಲ್ಲೂಕಿನ 160 ಮಂದಿ ನಿರ್ಗತಿಕ ಬಂಧುಗಳಿಗೆ ಮನೆ ಬಾಗಿಲಿಗೆ ಸೇವಾ ಪ್ರತಿನಿಧಿಗಳೊಂದಿಗೆ ತೆರಳಿ 160 ಮಂದಿ ಫಲಾನುಭವಿಗಳಿಗೆ ರೂ 132000 ಮಾಶಾಶನದ ಮೊತ್ತವನ್ನು ವಿತರಿಸಿ ಮಾತನಾಡಿದರು.
ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ ರಾಜ್ಯಾದ್ಯಂತ ಪ್ರತಿಯೊಂದು ಗ್ರಾಮೀಣ ಪ್ರದೇಶಗಳಲ್ಲಿಯೂ ಕಡು ಬಡವರಿಗೆ ಮತ್ತು ಯಾರು ನೋಡಿಕೊಳ್ಳದೇ ಇರುವ ನಿರ್ಗತಿಕರಿಗೆ ಮಾಶಾಸನವನ್ನು ನೀಡುತ್ತಾ ಬರುತ್ತಿದ್ದು ಅಶಕ್ತರಿಗೆ ಆಶಾಕಿರಣವಾಗಿ ಯೋಜನೆ ಕೆಲಸ ಮಾಡುತ್ತಿದೆ. ಇದೀಗ ಜನತಾ ಕರ್ಪ್ಯೂ ಇರುವುದರಿಂದ ಫಲಾನುಭವಿಗಳಿಗೆ ಮಾಶಾಸನ ಪಡೆಯಲು ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ತಾಲ್ಲೂಕಿನ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರು ಮನೆ ಮನೆಗೆ ತೆರಳಿ ಮಾಶಾಸನವನ್ನು ವಿತರಿಸುವ ಕಾರ್ಯ ಮಾಡುತ್ತಿದ್ದಾರೆ ಎಂದರು.