ಶಿಡ್ಲಘಟ್ಟ ತಾಲ್ಲೂಕಿನ ಆನೂರು ಗ್ರಾಮದ ಹಾಲು ಉತ್ಪಾದಕರ ಸಹಕಾರಿ ಸಂಘದ ಕಟ್ಟಡಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಮಂಜೂರಾದ 2 ಲಕ್ಷ ರೂ ಅನುದಾನದ ಮಂಜೂರಾತಿ ಪತ್ರವನ್ನು ಸಮಿತಿಯ ಪದಾಧಿಕಾರಿಗಳಿಗೆ ನೀಡಿ ಗ್ರಾಮೀಣಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಸಿ.ಎಸ್. ಪ್ರಶಾಂತ್ ಮಾತನಾಡಿದರು.
ಹೈನುಗಾರಿಕೆಯನ್ನು ಅವಲಂಬಿಸಿ ಬದುಕುವ ಬಹಳಷ್ಟು ಕುಟುಂಬಗಳು ಈ ಭಾಗದಲ್ಲಿವೆ. ಅವರಿಗೆ ಹತ್ತಿರದಲ್ಲಿಯೇ ಹಾಲು ಶೇಖರಣೆ ಮಾಡಲು ಕಟ್ಟಡವಿದ್ದಲ್ಲಿ ಹೈನುಗಾರಿಕೆ ಲಾಭದಾಯಕವಾಗುತ್ತದೆ ಹಾಗೂ ಸಮಯದ ಉಳಿತಾಯವಾಗುತ್ತದೆ ಎಂಬ ಉದ್ದೇಶದಿಂದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು ರಾಜ್ಯದ ಅನೇಕ ಹಳ್ಳಿಗಳಲ್ಲಿ ಇಂತಹ ಕಟ್ಟಡ ರಚನೆಗೆ ಅನುದಾನವನ್ನು ನೀಡುತ್ತಿದ್ದಾರೆ. ಗ್ರಾಮದ ಪ್ರತಿಯೊಂದು ಕುಟುಂಬವೂ ಆರ್ಥಿಕವಾಗಿ ಸ್ವಾವಲಂಬನೆಯನ್ನು ಹೊಂದಬೇಕು. ಶ್ರಮಿಕರಿಗೆ, ವಯೋವೃದ್ಧರಿಗೆ, ಮಹಿಳೆಯರಿಗೆ ವಿವಿಧ ಯೋಜನೆಗಳ ಮೂಲಕ ನೆರವನ್ನು ನೀಡಲಾಗುತ್ತಿದೆ. ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳುವಂತಾಗಲಿ ಎಂದು ಅವರು ತಿಳಿಸಿದರು.
ಈ ಸಂದರ್ಭಲ್ಲಿ ತಾಲ್ಲೂಕು ಯೋಜನಾಧಿಕಾರಿ ಪ್ರಕಾಶ್ ಕುಮಾರ್, ಜನಜಾಗೃತಿ ಯೋಜನಾಧಿಕಾರಿ ಗಣೇಶ್ ಆಚಾರ್ಯ, ಗ್ರಾಮ ಪಂಚಾಯತ್ ಉಪಾಧ್ಯಕ್ಷ ಪಿ.ಎನ್.ವಿಜಯೇಂದ್ರ. ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಎನ್.ನಾಗೇಶ್, ಕಾರ್ಯದರ್ಶಿ ಆರ್.ಸುರೇಶ್, ನಿರ್ದೇಶಕರಾದ ರಾಜ್ ಕುಮಾರ್, ವರದರಾಜು, ರಾಜೇಶ್, ಚಿಕ್ಕಪ್ಪಣ್ಣ, ಮೇಲ್ವಿಚಾರಕ ನವೀನ್, ಸೇವಾಪ್ರತಿನಿಧಿ ಸಾವಿತ್ರಿ ಹಾಗೂ ಗ್ರಾಮಸ್ಥರು ಹಾಜರಿದ್ದರು.