ಶಿಡ್ಲಘಟ್ಟ ತಾಲ್ಲೂಕಿನ ಮೇಲೂರಿನ ಸರ್ಕಾರಿ ಶಾಲೆಯ ಆವರಣದಲ್ಲಿ ಗುರುವಾರ 54 ಕುಟುಂಬಗಳಿಗೆ ಧರ್ಮಾಧಿಕಾರಿಗಳು ನೀಡಿದ ಆಹಾರದ ಕಿಟ್ ವಿತರಣೆ ಮಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲ್ಲೂಕು ಯೋಜನಾಧಿಕಾರಿ ಪ್ರಕಾಶ್ ಕುಮಾರ್ ಮಾತನಾಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಚತುರ್ದಾನಗಳಿಗೆ ಪ್ರಸಿದ್ಧಿಯನ್ನು ಪಡೆದಿದ್ದು ಕೋವಿಡ್ ಎರಡನೆ ಅಲೆಯ ಈ ಸಂಕಷ್ಟದ ಸಮಯದಲ್ಲಿ ಸೋಂಕಿತರ ಪ್ರಯಾಣಕ್ಕಾಗಿ ಉಚಿತ ವಾಹನ ವ್ಯವಸ್ಥೆ, ಕೋವಿಡ್ ಸೋಂಕಿತ ರಿಗಾಗಿ ಕೋವಿಡ್ ಕೇರ್ ಸೆಂಟರ್, ಉಚಿತ ಆಮ್ಲಜನಕ ಒದಗಣೆ, 300 ಆಕ್ಸಿಜನ್ ಕಾನ್ಸಂಟ್ರೇಟರ್, ಆಕ್ಸಿಜನ್ ವೆಂಟಿಲೇಟರ್, ಹಸಿದವರಿಗೆ ಊಟ ಆಹಾರದ ಕಿಟ್ ಗಳ ಒದಗಣೆಯನ್ನು ರಾಜ್ಯಾದ್ಯಂತ ಮಾಡಲಾಗುತ್ತಿದೆ.
ಮೇಲೂರು ಭಾಗದ ಬಡ ಕುಟುಂಬಗಳಿಗೆ ಧರ್ಮಸ್ಥಳದ ಧರ್ಮಾಧಿಕಾರಿಯವರು ಅಗತ್ಯ ಆಹಾರ ವಸ್ತುಗಳ ಕಿಟ್ ಗಳನ್ನು ವಿತರಣೆ ಮಾಡಲು ಅವಕಾಶ ನೀಡಿದ್ದು ಈ ದಿನ ವಿತರಣೆ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಉಮೇಶ್ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಹತ್ತು ಹಲವಾರು ಕಾರ್ಯಕ್ರಮಗಳ ಮೂಲಕ ಸಂಕಷ್ಟದ ಸಂದರ್ಭದಲ್ಲಿ ಬಡವರ ಪರಿಸ್ಥಿತಿಯನ್ನು ಅರಿತುಕೊಂಡು ಸೇವೆ ಸಲ್ಲಿಸುತ್ತಿದ್ದಾರೆ. ಧರ್ಮಸ್ಥಳದ ಧರ್ಮಾಧಿಕಾರಿಯವರು ಪರ್ಯಾಯ ಸರ್ಕಾರದ ರೀತಿಯಲ್ಲಿ ರಾಜ್ಯದ ಜನತೆಗೆ ಸಹಕಾರ ನೀಡುತ್ತಿದ್ದಾರೆ ಎಂದು ಹೇಳಿ, ಇಂತಹ ಮಾನವೀಯ ಸೇವೆ ನೀಡುತ್ತಿರುವ ಪೂಜ್ಯರಿಗೆ ವಿಶೇಷ ಅಭಿನಂದನೆಗಳನ್ನು ಸಲ್ಲಿಸಿದರು.
ಮೇಲ್ವಿಚಾರಕಿ ಅನಿತಾ ನೇತ್ರಾ, ಧರ್ಮೇಂದ್ರ, ಶ್ರೀನಿವಾಸ ಮೂರ್ತಿ, ಒಕ್ಕೂಟದ ಅಧ್ಯಕ್ಷರಾದ ಅಶ್ವತ್ಥಮ್ಮ ಯೋಜನೆಯ ಕಾರ್ಯಕರ್ತರಾದ ಭೀಮ್ ರಾಜ್, ಶ್ರೀರಂಗಯ್ಯ, ಸೇವಾಪ್ರತಿನಿಧಿ ಮುನಿರಾಜು, ಪದ್ಮಾ, ನೇತ್ರಾವತಿ, ಯಶೋಧಾ ಹಾಜರಿದ್ದರು.