Nadipinayakanahalli, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ನಡಿಪಿನಾಯಕನಹಳ್ಳಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ (SKDRDP) “ನಮ್ಮೂರು ನಮ್ಮ ಕೆರೆ” ಕಾರ್ಯಕ್ರಮದಡಿಯಲ್ಲಿ ಹೂಳೆತ್ತಿ ಪುನಶ್ಚೇತನಗೊಳಿಸಿದ ಕೆರೆಯನ್ನು (Lake Rejuvenation) ಗ್ರಾಮಸ್ಥರಿಗೆ ಹಸ್ತಾಂತರ ಮಾಡಿ ತಹಶಿಲ್ದಾರ್ ಬಿ.ಎಸ್.ರಾಜೀವ್ ಅವರು ಮಾತನಾಡಿದರು.
ಬತ್ತಿ ಹೋಗುತ್ತಿರುವ ನಾಡಿನ ಜಲಮೂಲಗಳ ರಕ್ಷಣೆಯಲ್ಲಿ ಧರ್ಮಸ್ಥಳ ಸಂಸ್ಥೆ ತೋರಿಸುವ ಕಾಳಜಿ ಶ್ಲಾಘನೀಯವಾದದ್ದು. ಧರ್ಮಸ್ಥಳದ ಧರ್ಮಾಧಿಕಾರಿಗಳ ಮಾರ್ಗದರ್ಶನದಲ್ಲಿ ರಾಜ್ಯದೆಲ್ಲೆಡೆ ನೂರಾರು ಸಮಾಜಮುಖಿ ಕಾರ್ಯಕ್ರಮಗಳು ನಡೆಯುತ್ತಿದ್ದು ಬಹಳ ಮುಖ್ಯವಾಗಿ ಹೂಳು ತುಂಬಿ ಮೈದಾನದಂತಿರುವ ಕೆರೆಗಳನ್ನು ಗುರುತಿಸಿ ಪುನಶ್ಚೇತನಗೊಳಿಸಿ ರೈತರ ಕೃಷಿಗೆ ಪೂರಕ ವಾತಾವರಣವನ್ನು ನಿರ್ಮಿಸುತ್ತಿರುವುದು ಅತ್ಯಂತ ಪುಣ್ಯದ ಕಾರ್ಯವಾಗಿದೆ ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಸಿ.ಎಸ್.ಪ್ರಶಾಂತ್ ಮಾತನಾಡಿ, ಧರ್ಮಸ್ಥಳ ಸಂಸ್ಥೆಯ ಮೂಲಕ ರಾಜ್ಯಾದ್ಯಂತ ಇದುವರೆಗೆ 429 ಕೆರೆಗಳನ್ನು ಹೂಳೆತ್ತಿದ್ದು, ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಇದುವರೆಗೆ 4 ಕೆರೆಗಳನ್ನು 69 ಲಕ್ಷ ವೆಚ್ಚದಲ್ಲಿ ಪುನಶ್ಚೇತನಗೊಳಿಸಲಾಗಿದೆ. ಕಾಕತಾಳೀಯವೆಂಬಂತೆ ಹೂಳೆತ್ತಿರುವ ಅಷ್ಟು ಕೆರೆಗಳಲ್ಲೂ ನೀರು ತುಂಬಿರುವುದು ಪೂಜ್ಯರ ಪ್ರಾಮಾಣಿಕ ಕಾಯಕಕ್ಕೆ ದೇವರು ಕೊಟ್ಟ ಪ್ರತಿಫಲ ಎಂದರು.
ತಾಲ್ಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಜಿ.ಮುನಿರಾಜು ಮಾತನಾಡಿ, ಪ್ರತಿಯೊಬ್ಬರು ಪ್ರತಿದಿನ ದೇವರಿಗೆ ಕೈ ಮುಗಿದು ದೈನಂದಿನ ಕೆಲಸವನ್ನು ಪ್ರಾರಂಭಿಸಿದರೆ, ರೈತ ಮೊದಲು ಈ ಮಣ್ಣಿಗೆ ಕೈಮುಗಿದು ತನ್ನ ಕಾಯಕವನ್ನು ಪ್ರಾರಂಭಿಸುತ್ತಾನೆ. ರೈತನ ದುಡಿಮೆಯ ಫಲವನ್ನು ನಾವು ಆಹಾರದ ಮೂಲಕ ಅನುಭವಿಸುತ್ತೇವೆ. ಇಂತಹ ರೈತರಿಗೆ ಕೃಷಿಗೆ ಅವಶ್ಯಕವಾಗಿರುವುದು ನೀರು. ಇವತ್ತು ಮಳೆ ಬಂದರೂ ನೀರು ನಿಲ್ಲಲು ಜಾಗವಿಲ್ಲದಂತಾಗಿದ್ದು ಧರ್ಮಸ್ಥಳದ ಧರ್ಮಾಧಿಕಾರಿಗಳ ದೂರದೃಷ್ಟಿತ್ವದ ಯೋಜನೆಯಿಂದ ಕೆರೆಗಳ ಸಂರಕ್ಷಣೆಯಾಗುತ್ತಿದೆ. ಕೆರೆಗಳನ್ನು ಉಳಿಸಿ ಮುಂದಿನ ಪೀಳಿಗೆಗೆ ವರ್ಗಾಯಿಸಿ ಎಂದು ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲ್ಲೂಕು ಯೋಜನಾಧಿಕಾರಿ ಪ್ರಕಾಶ್ ಕುಮಾರ್, ಕೆರೆ ಸಮಿತಿ ಅಧ್ಯಕ್ಷ ಗಂಗರೆಡ್ಡಿ, ವಲಯ ಅರಣ್ಯಾಧಿಕಾರಿ ರಘು, ಆರ್.ಐ. ಶಶಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸ್, ಪಿ.ಡಿ.ಒ ನೈನಾ ನಿಖತ್ ಅರಾ, ಗ್ರಾಮ ಪಂಚಾಯತ್ ಸದಸ್ಯರಾದ ಚನ್ನಕೃಷ್ಣ, ವೆಂಕಟಲಕ್ಷ್ಮಮ್ಮ, ಹಿತ್ತಲಹಳ್ಳಿ ಸುರೇಶ್, ಭಕ್ತರಹಳ್ಳಿ ಹೇಮಂತ್ ಕುಮಾರ್, ಸೋಮನಾಥ್, ರಮೇಶ್, ಮೇಲ್ವಿಚಾರಕರಾದ ಚೇತನ್, ರಾಜೇಶ್, ವಲಯದ ಎಲ್ಲಾ ಸೇವಾಪ್ರತಿನಿಧಿಗಳು ಹಾಜರಿದ್ದರು.