ನಗರದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಚೇರಿಯಲ್ಲಿ ಮೈಕ್ರೊಬಚತ್ ಪಾಲಿಸಿ ಮಾಡಿ ಮರಣ ಹೊಂದಿದ ಇಬ್ಬರು ಸದಸ್ಯರ ಮನೆಯವರಿಗೆ 2,50,000 ರೂ ವಿಮಾ ಸಾಂತ್ವನ ಮೊತ್ತವನ್ನು ವಿತರಣೆ ಮಾಡಿ ಜೀವ ವಿಮಾ ಸಂಸ್ಥೆ ಬೆಂಗಳೂರು ಪ್ರಭಂದಕ ರವೀಂದ್ರ ಮಾತನಾಡಿದರು.
ಧರ್ಮಸ್ಥಳ ಸಂಸ್ಥೆಯ ಸಹಕಾರದೊಂದಿಗೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇದುವರೆಗೆ 13,000 ಮಂದಿ ಸದಸ್ಯರಿಗೆ ಭವಿಷ್ಯದ ಜೀವನ ಭದ್ರತೆಗೆ ಪಾಲಿಸಿಯನ್ನು ಮಾಡಿಸಿದ್ದು, ಈಗಾಗಲೇ ಮರಣ ಹೊಂದಿದ ಸದಸ್ಯರಿಗೆ ಕ್ಲಪ್ತ ಸಮಯದಲ್ಲಿ ಮರಣ ಸಾಂತ್ವನ ಮೊತ್ತವನ್ನು ದೊರಕಿಸಿಕೊಡಲಾಗಿದೆ ಎಂದು ಅವರು ತಿಳಿಸಿದರು.
ಜಿಲ್ಲಾ ನಿರ್ದೇಶಕರಾದ ವಸಂತ್ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಮೈಕ್ರೊಬಚತ್ ಪಾಲಿಸಿಯನ್ನು ಮಾಡಿಸಿ ವೃದ್ಧಾಪ್ಯದಲ್ಲಿ ಮತ್ತೊಬ್ಬರನ್ನು ಅವಲಂಬಿಸದೇ ಬದುಕುವುದನ್ನು ಯೋಜನೆ ಕಲಿಸಿಕೊಟ್ಟಿದೆ ಎಂದರು.
ಜನಜಾಗೃತಿ ವೇದಿಕೆ ಸದಸ್ಯ ಎ.ಎಂ. ತ್ಯಾಗರಾಜ್ ಮಾತನಾಡಿ, ಧರ್ಮಸ್ಥಳ ಸಂಸ್ಥೆಯಲ್ಲಿ ಹುಟ್ಟಿನಿಂದ ಪ್ರಾರಂಭವಾಗಿ ಸಮಾಜದಲ್ಲಿ ಸ್ವಾವಲಂಬಿಯಾಗಿ ಬದುಕಲು ಹಾಗೂ ವೃದ್ಧಾಪ್ಯದಲ್ಲಿ ಯಾರನ್ನು ಆಶ್ರಯಿಸದೇ ಸಂತೃಪ್ತ ಜೀವನ ನಡೆಸಲು ನೂರಾರು ಕಾರ್ಯಕ್ರಮಗಳಿದ್ದು ಇದರ ಸದುಪಯೋಗವನ್ನು ಪಡೆದುಕೊಳ್ಳಿ ಎಂದರು.
ಈ ಸಂದರ್ಭದಲ್ಲಿ ಹೌಸಿಂಗ್ ಬೋರ್ಡ್ ನ ಜಮೃದ್ದ್ ಅವರಿಗೆ 2,50,000 ರೂ ಮತ್ತು ಉಲ್ಲೂರುಪೇಟೆಯ ಪದ್ಮಾ ಅವರಿಗೆ 50,000 ರೂ ವಿಮಾ ಮರಣ ಸಾಂತ್ವನವನ್ನು ವಿತರಿಸಲಾಯಿತು.
ಪ್ರಗತಿಪರ ಕೃಷಿಕರಾದ ಹಿತ್ತಲಹಳ್ಳಿ ಸುರೇಶ್, ತಾಲ್ಲೂಕು ಯೋಜನಾಧಿಕಾರಿ ಪ್ರಕಾಶ್ ಕುಮಾರ್, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ವೆಂಕಟಸುಬ್ಬಯ್ಯ, ಜ್ಞಾನವಿಕಾಸ ಸಮನ್ವಯಾಧಿಕಾರಿ ಲಕ್ಷ್ಮಿ, ಎನ್.ಆರ್.ಎಲ್.ಎಂ ಸಮನ್ವಯಾಧಿಕಾರಿ ಮನು, ಮೇಲ್ವಿಚಾರಕರಾದ ಜ್ಯೋತಿ ಮತ್ತು ನಾರಪ್ಪ, ಸೇವಾಪ್ರತಿನಿಧಿ ಬೀಬಿಜಾನ್ ಹಾಜರಿದ್ದರು.