ಶಿಡ್ಲಘಟ್ಟ ತಾಲ್ಲೂಕಿನ ಕೋವಿಡ್ ಕೇರ್ ಸೆಂಟರಿನಲ್ಲಿ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಕೋವಿಡ್ ಸೋಂಕಿತರಿಗೆ ಆಗತ್ಯ ಆಹಾರ ವಸ್ತುಗಳನ್ನು ನೀಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ತಹಶೀಲ್ದಾರ್ ರಾಜೀವ್ ಮಾತನಾಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರ ಆಶಯದಂತೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಶಿಡ್ಲಘಟ್ಟ ತಾಲ್ಲೂಕಿನ ಕೋವಿಡ್ ಸೆಂಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವ 240 ಕೋವಿಡ್ ಸೋಂಕಿತರಿಗೆ ಆಗತ್ಯ ಆಹಾರ ವಸ್ತುಗಳನ್ನು ವಿತರಿಸಲಾಗುತ್ತಿದೆ. ದುರ್ಬಲರು ಹಾಗೂ ಅಶಕ್ತರ ಪಾಲಿಗೆ ಆಸರೆಯಾಗಿದ್ದಾರೆ ಎಂದು ಅವರು ತಿಳಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೋವಿಡ್ ಸೋಂಕಿತರಿಗೆ ಧೈರ್ಯ ತುಂಬುವ ಮಹತ್ಕಾರ್ಯ ಮಾಡುತ್ತಿದ್ದು, ತಾವು ಮಾಡುವ ಸತ್ಕಾರ್ಯಗಳಿಂದ ಜನಮನ್ನಣೆ ಗಳಿಸಿದ್ದಾರೆ. ಕೋವಿಡ್ ಸಂಕಷ್ಟದಲ್ಲಿ ರಾಜ್ಯಾದ್ಯಂತ ಧರ್ಮಾಧಿಕಾರಿಯವರು ಮಾಡುವ ಸಹಾಯ ಬಹಳ ಪ್ರಯೋಜನಕಾರಿಯಾಗಿದೆ ಎಂದರು.
ಜಿಲ್ಲೆಯ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ಪ್ರಶಾಂತ್ ಮಾತನಾಡಿ, ಧರ್ಮಸ್ಥಳದ ಗ್ರಾಮಾಭಿವೃದ್ಧಿ ಸಂಸ್ಥೆಯ ವತಿಯಿಂದ ಹತ್ತಾರು ಕಾರ್ಯಕ್ರಮಗಳನ್ನು ಮಾಡುತ್ತಾ ಬರುತ್ತಿದ್ದು ಸಾಮಾಜಿಕ, ಆರ್ಥಿಕತೆಯ ಜೊತೆಗೆ ಮನೋಸ್ಥೈರ್ಯ ತುಂಬುವ ಕೆಲಸವನ್ನು ಮಾಡುತ್ತಿದ್ದೇವೆ. ಜಗತ್ತಿಗೆ ಆವರಿಸಿದ ಮಹಾಮಾರಿಯು ಬಡವ ಬಲ್ಲಿದ ಎನ್ನದೇ ಎಲ್ಲರಿಗೂ ಕಾಟ ಕೊಡುತ್ತಿದ್ದು ಇಂತಹ ಸಂಕಷ್ಟದ ಸಂದರ್ಭದಲ್ಲಿ ಕಷ್ಟದಲ್ಲಿ ಸಿಲುಕಿದವರ ರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಹೆಗ್ಗಡೆಯವರು ರಾಜ್ಯಾದ್ಯಂತ 5 ಕಡೆಗಳಲ್ಲಿ ಉಚಿತ ಕೋವಿಡ್ ಸೆಂಟರ್ ತೆರೆದು ಉಚಿತ ಚಿಕಿತ್ಸೆ ಹಾಗೂ ದಿನನಿತ್ಯ ಉತ್ತಮ ಆಹಾರಗಳನ್ನು ಒದಗಿಸುತಿದ್ದು, ರಾಜ್ಯಾದ್ಯಂತ ಕೋವಿಡ್ ರೋಗಿಗಳಿಗೆ ಓಡಾಡಲು ಉಚಿತ ವಾಹನ ಸೌಲಭ್ಯ, ಆಮ್ಲಜನಕ ಒದಗಣೆ, ಅಲ್ಲಲ್ಲಿ ತೊಂದರೆಗೊಳಗಾದವರಿಗೆ ಊಟದ ವ್ಯವಸ್ಥೆ,ಆಹಾರ ಕಿಟ್, ಆಸ್ಪತ್ರೆಗಳಿಗೆ ಉಪಕರಣಗಳ ಒದಗಣಿಯ ಜೊತೆ ನಿರ್ಗತಿಕರಿಗೆ ಮಾಶಾಸನದ ವ್ಯವಸ್ಥೆಯನ್ನು ಕಲ್ಪಿಸಿ ಕೊಟ್ಟಿದ್ದಾರೆ ಎಂದರು.
ಈ ಸಂದರ್ಭದಲ್ಲಿ ತಾಲ್ಲೂಕು ಯೋಜನಾಧಿಕಾರಿ ಪ್ರಕಾಶ್ ಕುಮಾರ್, ತಾಲ್ಲೂಕು ಶಿರಸ್ತೇದಾರ್ ಮಂಜುನಾಥ್, ಕಾರ್ಯಕರ್ತರಾದ ದಿನೇಶ್, ಅನಿತಾ, ಸುಮಂಗಲಾ, ನವೀನ್ ಹಾಜರಿದ್ದರು.