Sidlaghatta : ಶಿಡ್ಲಘಟ್ಟದ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ (SKDRDP) ಕಚೇರಿಯಲ್ಲಿ ತಾಲ್ಲೂಕಿನ 25 ಮಂದಿಗೆ 2 ಲಕ್ಷ ಮೊತ್ತದ ಆರೋಗ್ಯ ರಕ್ಷಾ ವಿಮಾ (Arogya Raksha) ಮೊತ್ತದ ಚೆಕ್ ವಿತರಣೆ ಮಾಡಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಜಿಲ್ಲಾ ನಿರ್ದೇಶಕ ಸಿ.ಎಸ್. ಪ್ರಶಾಂತ್ ಅವರು ಮಾತನಾಡಿದರು.
ಆರೋಗ್ಯವೇ ಮಹಾ ಭಾಗ್ಯ. ಮನುಷ್ಯನ ಆರೋಗ್ಯ ಕೈ ಕೊಟ್ಟಾಗ ನೆಮ್ಮದಿ ಮಾಯವಾಗುತ್ತದೆ. ಜೊತೆಗೆ ಅರ್ಥಿಕ ಸ್ಥಿತಿ ಕಷ್ಟದಲ್ಲಿದ್ದಾಗ ಸಮಾಜದ ದುರ್ಬಲ ವರ್ಗದ ಜನರು ಉತ್ತಮ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಗದೇ ಹತಾಶರಾಗುವುದು ದುರಂತ ಎಂದು ವಿಷಾದ ವ್ಯಕ್ತಪಡಿಸಿದರು.
ಧರ್ಮಸ್ಥಳದ ಧರ್ಮಾಧಿಕಾರಿಗಳ ಮಾರ್ಗದರ್ಶನದಲ್ಲಿ ಒಂದು ಕಡೆ ಬದುಕು ಕಟ್ಟಿಕೊಳ್ಳುವ ನೂರಾರು ಕಾರ್ಯಕ್ರಮಗಳು ನಡೆಯುತ್ತಿದ್ದರೆ, ಮತ್ತೊಂದೆಡೆ ಮನುಷ್ಯನ ಆರೋಗ್ಯ ಕೈ ಕೊಟ್ಟಾಗ ನೆರವಾಗುವ ಆರೋಗ್ಯ ರಕ್ಷಾ ಕಾರ್ಡ್ ಸಹ ನೀಡಲಾಗುತ್ತಿದೆ. ಇದು ಎಷ್ಟೋ ಮಂದಿ ಬಡ ದುರ್ಬಲ ವರ್ಗದ ಅನಾರೋಗ್ಯ ಪೀಡಿತ ಜನರಿಗೆ ನೆರವಾಗಿದ್ದು ನೆಮ್ಮದಿಯ ಜೀವನ ನಡೆಸಲು ಸಹಕಾರಿಯಾಗಿದೆ ಎಂದರು.
ರೆಡ್ ಕ್ರಾಸ್ ಸಂಸ್ಥೆಯ ಗುರುರಾಜ್ ರಾವ್ ಮಾತನಾಡಿ, ರಕ್ತದಾನ ಮಹಾದಾನ. ಒಬ್ಬರು ನೀಡುವ ರಕ್ತ 3 ಮಂದಿಯ ಜೀವವನ್ನು ಉಳಿಸಬಹುದು. ಮೂರ್ಚೆ ರೋಗ ಮಾನಸಿಕ ಅಸ್ವಸ್ಥರಿಗೆ ನಮ್ಮ ಸಂಸ್ಥೆಯಿಂದ ಉಚಿತ ಔಷಧಿ ವಿತರಣೆಯನ್ನು ಮಾಡುತ್ತಿದ್ದು ಇದರ ಸದುಪಯೋಗವನ್ನು ಪಡೆದುಕೊಳ್ಳಿ ಹಾಗೂ ಧರ್ಮಸ್ಥಳ ಸಂಸ್ಥೆ ಯ ಪ್ರತಿಯೊಂದು ಕಾರ್ಯಕ್ರಮಗಳು ಸಮಾಜಮುಖಿಯಾಗಿದ್ದು ನಮ್ಮ ಸಂಸ್ಥೆಗೂ ಪೂಜ್ಯರು ನೆರವನ್ನು ನೀಡಿರುತ್ತಾರೆ ಎಂದರು.
ಈ ಸಂದರ್ಭದಲ್ಲಿ ತಾಲ್ಲೂಕು ಯೋಜನಾಧಿಕಾರಿ ಪ್ರಕಾಶ್ ಕುಮಾರ್, ಮೇಲ್ವಿಚಾರಕ ನವೀನ್, ಆಡಳಿತ ಪ್ರಭಂದಕ ನವೀನ್ ಹಾಜರಿದ್ದರು.