Jangamakote, Sidlaghatta : ರೈತ ಉತ್ಪಾದಕರ ಕಂಪನಿಯಿಂದ ಸಾಕಷ್ಟು ಸೌಲಭ್ಯಗಳಿದ್ದು ಅವುಗಳ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ಜಂಗಮಕೋಟೆ ರೇಷ್ಮೆ ಬೆಳೆಗಾರರ ರೈತ ಉತ್ಪಾದಕರ ಕಂಪನಿ ಅಧ್ಯಕ್ಷ ಭಕ್ತರಹಳ್ಳಿ ಬಿ. ಚಿದಾನಂದ ಮೂರ್ತಿ ತಿಳಿಸಿದರು.
ತಾಲ್ಲೂಕಿನ ಜಂಗಮಕೋಟೆ ಕ್ರಾಸ್ ನಲ್ಲಿ ಜಂಗಮಕೋಟೆ ರೇಷ್ಮೆ ಬೆಳೆಗಾರರ ರೈತ ಉತ್ಪಾದಕರ ಕಂಪನಿ ಲಿಮಿಟಡ್ ವತಿಯಿಂದ ಚಂದ್ರಿಕೆ ಕೊಳ್ಳಲು ರೈತ ಉತ್ಪಾದಕರ ಕಂಪನಿಯ ಸಹಾಯಧನ ವಿತರಿಸಿ ಅವರು ಮಾತನಾಡಿದರು.
ರೈತ ಉತ್ಪಾದಕ ಸಂಸ್ಥೆ ಕಾರ್ಪೋರೇಟ್ ಕಂಪನಿಯಂತೆಯೇ ಕಾರ್ಯ ನಿರ್ವಹಣೆ ಮಾಡುತ್ತವೆ. ಕೃಷಿ ಪರಿಕರ ಮಾರಾಟ, ಕೃಷಿ ಉತ್ಪನ್ನಗಳ ಸಂಸ್ಕರಣೆ, ಉತ್ಪನ್ನಗಳ ರಫ್ತು ಮತ್ತು ಆಮದು ಪ್ರಕ್ರಿಯೆ ಕೈಗೊಳ್ಳಬಹುದು. ಬೀಜ, ಗೊಬ್ಬರ ಸೇರಿದಂತೆ ಕೃಷಿ ಚಟುವಟಿಕೆಗಳಿಗೆ ಬೇಕಾದ ವಸ್ತು, ಉಪಕರಣಗಳನ್ನು ನೇರವಾಗಿ ಆಯಾ ಕಂಪನಿಯಿಂದ ಖರೀದಿಸಿ ಮಾರಾಟ ಮಾಡುವ ಅಧಿಕಾರ ರೈತ ಉತ್ಪಾದಕರ ಸಂಸ್ಥೆಗಿರುತ್ತದೆ. ಒಗ್ಗಟ್ಟಿನಿಂದ ಬಲವಿದೆ ಎಂಬ ನಮ್ಮ ಹಿರಿಯರ ಕಲ್ಪನೆಯನ್ನು ಜಾರಿಗೊಳಿಸುವ ಮೂಲಕ ರೈತರು ಆರ್ಥಿಕವಾಗಿ ಬೆಳೆಯಲು ಅವಕಾಶವಿದೆ ಎಂದರು.
ಫಲಾನುಭವಿಗಳಾದ ದೇವಾಗನಹಳ್ಳಿ ಶ್ರೀನಿವಾಸ್, ಕಲ್ಯಾಪುರ ಲಕ್ಷ್ಮೀನಾರಾಯಣ , ಘಟಮಾರನಹಳ್ಳಿ ರಮೇಶ್ ರವರು ತಲಾ ಒಂದು ಲಕ್ಷ ರೂಪಾಯಿಗಳ ಸಹಾಯಧನದ ಚೆಕ್ ಪಡೆದರು.
ಕಂಪನಿಯ ಅಧ್ಯಕ್ಷ ಬಿ. ಚಿದಾನಂದ ಮೂರ್ತಿ, ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ತಿಮ್ಮರಾಜು, ವಿಸ್ತರಣಾ ಅಧಿಕಾರಿ ಸೋಮಣ್ಣ, ನಿರ್ದೇಶಕರಾದ ಮಂಜುನಾಥ ಗೌಡ, ಕೆ ಕುಮಾರ್, ಜಿ. ಸಿ.ಪ್ರಕಾಶ್, ಮುರಳೀಧರ, ರೈತರು, ಷೇರುದಾರರು, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನರಸಿಂಹ ಮೂರ್ತಿ, ಲೆಕ್ಕಾಧಿಕಾರಿ ಕವನ ಹಾಜರಿದ್ದರು.