ಶಿಡ್ಲಘಟ್ಟ ತಾಲ್ಲೂಕಿನ ವೈ.ಹುಣಸೇನಹಳ್ಳಿಯ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ವೈ.ಹುಣಸೇನಹಳ್ಳಿ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಅಧ್ಯಕ್ಷ ಎಸ್.ಪಿ.ಬಸವರಾಜ್ ಮಾತನಾಡಿದರು.
ಕೊರೊನಾದಂತ ಕಷ್ಟ ಕಾಲದಲ್ಲಿ ರೈತರಿಗೆ, ಮಹಿಳೆಯರಿಗೆ ರಾಷ್ಟ್ರೀಯ ಬ್ಯಾಂಕುಗಳಿಗಿಂತಲೂ ಸ್ಥಳೀಯ ಸಹಕಾರ ಬ್ಯಾಂಕುಗಳು ಹೆಚ್ಚಿನ ಸವಲತ್ತು, ಸಾಲವನ್ನು ನೀಡಿವೆ. ನಾಲ್ಕು ವರ್ಷಗಳ ಹಿಂದೆ ಕೇವಲ 1 ಲಕ್ಷ ಮೂಲ ಬಂಡವಾಳದೊಂದಿಗೆ ಆರಂಭವಾದ ನಮ್ಮ ಈ ಸಹಕಾರಿ ಬ್ಯಾಂಕು ಇಂದು ಸುಮಾರು 50 ಲಕ್ಷ ರೂಗಳ ವಹಿವಾಟು ನಡೆಸುತ್ತಿದೆ. ಪ್ರತಿದಿನವೂ 50 ಸಾವಿರ ರೂ.ವ್ಯಾಪಾರ ವಹಿವಾಟು ನಡೆಸುವ ಮಟ್ಟಕ್ಕೆ ಬೆಳೆದಿದೆ. ಶೇ 100ರಷ್ಟು ಸಾಲ ವಾಪಸ್ಸಾತಿ ಇದೆ. ಬ್ಯಾಂಕಿನ ಆಡಳಿತ ಮಂಡಳಿಯ ಎಲ್ಲ ಸದಸ್ಯರು, ಸಿಬ್ಬಂದಿಯ ಸಹಕಾರದಿಂದ ಉತ್ತಮವಾಗಿ ನಡೆಯುತ್ತಿದೆ ಎಂದು ಹೇಳಿದರು.
ಸಹಕಾರ ಬ್ಯಾಂಕುಗಳಲ್ಲಿ ರಾಜಕೀಯ ನುಸುಳದಂತೆ ನೋಡಿಕೊಳ್ಳಬೇಕು. ಷೇರುದಾರರು ಹಾಗೂ ಸದಸ್ಯರು ಸಹಕಾರ ಬ್ಯಾಂಕಿನಲ್ಲಿ ಖಾತೆ ತೆರೆದು ವ್ಯವಹಾರ ನಡೆಸುವ ಮೂಲಕ ಬ್ಯಾಂಕಿನ ಆರ್ಥಿಕ ಅಭಿವೃದ್ದಿಗೆ ಎಲ್ಲರೂ ಸಹಕರಿಸಬೇಕೆಂದರು.
ವಾರ್ಷಿಕ ಆದಾಯ ಖರ್ಚು ವಿವರವನ್ನು ಮಂಡಿಸಲಾಯಿತು. ಉಚಿತವಾಗಿ ಮಣ್ಣಿನ ಪರೀಕ್ಷೆ ಮಾಡಿಸಿ ವರದಿಯ ಪತ್ರಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಬ್ಯಾಂಕಿನ ಸಿಇಒ ಅಕ್ಕಲಪ್ಪ, ನಿರ್ದೆಶಕರಾದ ಎಚ್.ಎಂ.ಕ್ಯಾತಪ್ಪ, ಗ್ಯಾಸ್ ಮುರಳಿ, ಆಂಜನೇಯರೆಡ್ಡಿ, ಬೈರಾರೆಡ್ಡಿ, ಎಸ್.ಮಂಜುನಾಥ್, ಸುಮಿತ್ರಮ್ಮ, ಮುನಿನಾರಾಯಣಪ್ಪ, ಆಂಜಿನಪ್ಪ, ಮಂಜುನಾಥ್, ಮುಖಂಡರಾದ ದೇವರಾಜ್, ರವಿಕುಮಾರ್ ಹಾಜರಿದ್ದರು.