Sidlaghatta : ಶಿಡ್ಲಘಟ್ಟ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಸೋಮವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆಯೋಜಿಸಿದ್ದ ಯುವ ಸೌರಭ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಎಂ.ಎನ್.ಸ್ವಾಮಿ ಅವರು ಮಾತನಾಡಿದರು.
ಕಲೆಯನ್ನು ಆಸ್ವಾದಿಸುವ ಮನಸ್ಥಿತಿ ಬಹಳ ಮುಖ್ಯ. ಓದಿನ ಜೊತೆಯಲ್ಲಿ ವಿದ್ಯಾರ್ಥಿಗಳಲ್ಲಿನ ಪ್ರತಿಭೆಯನ್ನು ಬೆಳೆಸುವ ಉದ್ದೇಶದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಸರ್ಕಾರಿ ಶಾಲೆಯಲ್ಲಿ ಓದುವ ಮಕ್ಕಳು ಕೀಳರಿಮೆಯಿಂದ ಮೊದಲು ಹೊರಬರಬೇಕು. ಸರ್ಕಾರಿ ಶಾಲೆಯಲ್ಲಿ ಓದಿ ನಾನು ತಹಶೀಲ್ದಾರ್ ಆಗಬಹುದಾದರೆ, ನೀವುಗಳೂ ಕೂಡ ಉನ್ನತ ಸ್ಥಾನವನ್ನು ಗಳಿಸಬಹುದು. ಪರಿಶ್ರಮ ಬಹಳ ಮುಖ್ಯ. ಸೋತಾಗ ಕಂಗೆಡಬಾರದು. ಜ್ಞಾನ ಸಂಪಾದಿಸಿ. ಆತ್ಮಾವಲೋಕನ ಮಾಡಿಕೊಂಡು ಮುಂದುವರೆಯಬೇಕು ಎಂದರು.
ಕಲಾವಿದ ದೇವರಮಳ್ಳೂರು ಮಹೇಶ್ ಕುಮಾರ್ ಮತ್ತು ತಂಡದಿಂದ ಸುಗಮ ಸಂಗೀತ, ನಿವೇದಿತ ಮತ್ತು ತಂಡದಿಂದ ಜನಪದ ಗೀತೆಗಳ ಗಾಯನ, ಮಧು ಆಶ್ರಿತ್ ಕುಮಾರ್ ಮತ್ತು ತಂಡದಿಂದ ಸಮೂಹ ನೃತ್ಯ ರೂಪಕ, ಯಶ್ವಂತ್ ಶಾಲಾ ವಿದ್ಯಾರ್ಥಿಗಳಿಂದ ಜಾನಪದ ನೃತ್ಯ, ನವೀನ್ ಕುಮಾರ್ ಮತ್ತು ತಂಡದಿಂದ ವೀರಗಾಸೆ, ಬಾಲು ಮತ್ತು ತಂಡದಿಂದ ಜಂಬೆ ಜಲಕ್, ಅಖಿಲೇಶ್ ಕುಮಾರ್ ಮತ್ತು ತಂಡದಿಂದ ಪೌರಾಣಿಕ ನಾಟಕ, ಜಾನಪದ ಹುಂಜ ಮುನಿರೆಡ್ಡಿ ಅವರಿಂದ ಜಾನಪದ ಗೀತೆಗಾಯನ ನಡೆದವು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಎನ್.ಮನೀಷ್, ಮುಖ್ಯ ಶಿಕ್ಷಕಿ ಕೆ.ಮಂಜುಳಾ, ಮಳ್ಳೂರು ಶಿವಣ್ಣ, ಸೋ.ಸು.ನಾಗೇಂದ್ರ ಹಾಜರಿದ್ದರು.