Y Hunasenahalli, Sidlaghatta : ಸ್ವಚ್ಛತೆ ಸ್ವಸ್ಥ ಬದುಕಿನ ಅರಿವು ಹಾಗೂ ಪ್ರತಿಯೊಬ್ಬರ ಸಾಮಾಜಿಕ ಕಾಳಜಿಯಾಗಬೇಕೆಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ನಾರಾಯಣ ತಿಳಿಸಿದರು.
ತಾಲ್ಲೂಕಿನ ವೈ.ಹುಣಸೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಗಡಿ, ಸಂತೆಯಲ್ಲಿ ಬುಧವಾರ ಪ್ಲಾಸ್ಟಿಕ್ ಹಾಗೂ ಕಸಮುಕ್ತ ಸಮಾಜದೆಡೆಗೆ ನಮ್ಮ ಹೆಜ್ಜೆ ಆಗಬೇಕು ಎಂದು ಜನ ಜಾಗೃತಿ ಮೂಡಿಸುತ್ತಾ ಅವರು ಮಾತನಾಡಿದರು.
ತಾಲ್ಲೂಕಿನ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೀದಿ ಬೀದಿಗಳ ಅಂಗಡಿ ಮುಂಗ್ಗಟ್ಟು ಸೇರಿದಂತೆ ಸಾರ್ವಜನಿಕರಲ್ಲಿ ಸ್ವಚ್ಛತೆ ಮತ್ತು ಪ್ಲಾಸ್ಟಿಕ್ ಮುಕ್ತ ಮಾಡುವಲ್ಲಿ ಅರಿವು ಮೂಡಿಸಲಾಗುತ್ತಿದೆ. ವೈ.ಹುಣಸೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಕಿರಾಣಿ ವರ್ತಕರು ಹಾಗೂ ಬೀದಿಬದಿ ವ್ಯಾಪಾರಸ್ಥರಿಗೆ ಪ್ಲಾಸ್ಟಿಕ್ ಉಪಯೋಗಿಸುವುದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿದರು.
ಗ್ರಾಮ ಪಂಚಾಯಿತಿ ಹಾಗೂ ಪಟ್ಟಣಗಳಲ್ಲಿ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವುದು ಸಾರ್ವಜನಿಕರಿಗಿಂತಲೂ ಮೊದಲು ವ್ಯಾಪಾರಸ್ಥರಿಗೆ ಅರಿವು ಮೂಡಿಸುವ ಅವಶ್ಯಕ. ಇದರೊಂದಿಗೆ ಸುಸ್ಥಿರ ಮೂಲ ಸೌಕರ್ಯಗಳ ಅಭಿವೃದ್ಧಿ ಉತ್ತೇಜಿಸಿ, ಪ್ರೋತ್ಸಾಹಿಸಲು ಹಾಗೂ ಪರಿಸರ ಸ್ನೇಹಿ ಸಾಮಗ್ರಿ ಬಳಕೆ ಮಾಡುವ ಮೂಲಕ ಪ್ಲಾಸ್ಟಿಕ್ ಮುಕ್ತ ಅಭಿಯಾನ ಯಶಸ್ವಿಗೊಳಿಸಲು ಸಹಕರಿಸಬೇಕು ಎಂದು ಅಂಗಡಿ ವ್ಯಾಪಾರಸ್ಥರಿಗೆ ಹಾಗೂ ಸಾರ್ವಜನಿಕರಿಗೆ ಅರಿವು ಮೂಡಿಸಿದರು.
ನರೇಗಾ ಸಹಾಯಕ ನಿರ್ದೇಶಕದ ಚಂದ್ರಪ್ಪ, ನರೇಗಾ ಸಿಬ್ಬಂದಿ, ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಜರಿದ್ದರು.