Y Hunasenahalli : ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಮೀಸಲಿದ್ದ ನಿವೇಶನವನ್ನು ವ್ಯಕ್ತಿಯೊಬ್ಬ ತನ್ನ ಹೆಸರಿಗೆ ಖಾತೆ ಮಾಡಿಸಿಕೊಂಡಿದ್ದು ಕೂಡಲೆ ಖಾತೆ ರದ್ದುಪಡಿಸಿ ಡೇರಿಗೆ ಖಾತೆ ಮಾಡಬೇಕೆಂದು ಗ್ರಾಮದ ನೂರಾರು ಮಂದಿ ಗ್ರಾಮ ಪಂಚಾಯಿತಿ ಕಚೇರಿಗೆ ಶನಿವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ತಾಲ್ಲೂಕಿನ ವೈ.ಹುಣಸೇನಹಳ್ಳಿ ಗ್ರಾಮ ಪಂಚಾಯಿತಿ ಕಚೇರಿಯ ಬಾಗಿಲು ಮುಚ್ಚಿ ಚಿಲಕ ಹಾಕಿ ಕೆಲ ಕಾಲ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ದಿಗ್ಬಂಧನ ವಿಧಿಸಿದರು.
ವೈ.ಹುಣಸೇನಹಳ್ಳಿಯಲ್ಲಿ ಕುಂದಲಗುರ್ಕಿ ರಸ್ತೆಯಲ್ಲಿ 40120 ಅಡಿ ಅಳತೆಯ ನಿವೇಶನ ಈ ಹಿಂದೆ ವೈ.ಹುಣಸೇನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಹೆಸರಲ್ಲಿ ಖಾತೆಯಿದ್ದು ಶಿಡ್ಲಘಟ್ಟ ತಾಲೂಕು ಪಂಚಾಯಿತಿ ಇಒ ಅವರ ನ್ಯಾಯಾಲಯದ ಆದೇಶದಂತೆ ಈ ಪೈಕಿ 2560 ಅಡಿ ನಿವೇಶನವನ್ನು ಶಂಕರಪ್ಪ ಎನ್ನುವವರಿಗೆ ಖಾತೆ ಮಾಡಲಾಗಿತ್ತಲ್ಲದೆ ನಂತರ ಗೋಪಾಲ್ ಎನ್ನುವವರ ಹೆಸರಿಗೆ ಖಾತೆ ಬದಲಾಗಿತ್ತು.
ಗೋಪಾಲ್ ಎನ್ನುವವರು ಸದರಿ ಜಾಗದಲ್ಲಿ ಅಂಗಡಿಗಳನ್ನು ನಿರ್ಮಿಸಲು ಪಾಯ ನಿರ್ಮಾಣ ಮಾಡಿದ್ದು ವೈ.ಹುಣಸೇನಹಳ್ಳಿಯ ಡೇರಿ ಆಡಳಿತ ಮಂಡಳಿ, ಷೇರುದಾರರು, ಹಾಲು ಉತ್ಪಾದಕರು ವಿರೋದಿಸಿದ್ದು ಗ್ರಾಮ ಪಂಚಾಯಿತಿಗೆ ದೂರು ಸಲ್ಲಿಸಿದ್ದಾರೆ. ಅಂಗಡಿಗಳನ್ನು ನಿರ್ಮಿಸಲು ಪರವಾನಗಿಯನ್ನೂ ಪಡೆಯದ ಗೋಪಾಲ್ ಅವರಿಗೆ ಪಂಚಾಯಿತಿಯಿಂದ ನೊಟೀಸ್ ಜಾರಿ ಮಾಡಿದ್ದರೂ ಕೆಲಸ ಮುಂದುವರೆಸಿದ್ದನ್ನು ವಿರೋಧಿಸಿ ವೈ.ಹುಣಸೇನಹಳ್ಳಿಯ ನೂರಾರು ಮಂದಿ ಗ್ರಾಮ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಡೇರಿಗೆ ಮೀಸಲಾಗಿದ್ದ ನಿವೇಶವನ್ನು ಅಕ್ರಮವಾಗಿ ಶಂಕರಪ್ಪ ಎನ್ನುವವರು ಮಾಡಿಸಿಕೊಂಡು ಇದೀಗ ಗೋಪಾಲ್ ಎನ್ನುವವರು ಖಾತೆಯನ್ನು ಮಾಡಿಸಿಕೊಂಡಿದ್ದು ಕೂಡಲೆ ಖಾತೆ ರದ್ದುಪಡಿಸಬೇಕೆಂದು ಒತ್ತಾಯಿಸಿ ಘೋಷಣೆಗಳನ್ನು ಕೂಗಿದರು.
ಖಾತೆಗಳನ್ನು ಮಾಡುವಲ್ಲಿ ಅಕ್ರಮ ನಡೆದಿದೆ. ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಬರಬೇಕೆಂದು ಪಟ್ಟು ಹಿಡಿದು ಕುಳಿತರು.
ತಾಲೂಕು ಪಂಚಾಯಿತಿ ಇಒ ಜಿ.ಮುನಿರಾಜು, ಗ್ರಾಮಾಂತರ ಠಾಣೆಯ ಎಸ್‌ಐ ಕೆ.ಸತೀಶ್, ಕಸಬಾ ಹೋಬಳಿ ಕಂದಾಯ ನಿರೀಕ್ಷಕ ಪ್ರಶಾಂತ್ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರ ಅಹವಾಲನ್ನು ಆಲಿಸಿದರು.
ನಂತರ ಮಾತನಾಡಿದ ಇಒ ಜಿ.ಮುನಿರಾಜು ಅವರು, ಸದರಿ ಜಾಗ ಸಧ್ಯಕ್ಕೆ ಗೋಮಾಳ ಜಾಗವಾಗಿದೆ. ಹಾಗಾಗಿ ಶಂಕರ್ ಹಾಗೂ ಆ ನಂತರ ಗೋಪಾಲ್ ಹೆಸರಿಗೆ ವರ್ಗಾವಣೆಯಾದ ಖಾತೆಯನ್ನು ರದ್ದುಪಡಿಸಲಾಗುವುದು. ಆದರೆ ಅದನ್ನು ಯಾರ ಹೆಸರಿಗೂ ಖಾತೆ ಮಾಡಲು ಬರುವುದಿಲ್ಲ ಅದು ಗೋಮಾಳ ಜಾಗವಾದ್ದರಿಂದ ನನ್ನ ಅಧಿಕಾರ ವ್ಯಾಪ್ತಿಗೆ ಅದು ಬರದು, ನೀವು ಮೇಲಿನ ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸಬಹುದು ಎಂದು ಪ್ರತಿಭಟನಾಕಾರರಿಗೆ ಸ್ಪಷ್ಟಪಡಿಸಿದರು.
ಸಮಸ್ಯೆ ಇತ್ಯರ್ಥ ಆಗುವವರೆಗೂ ವಿವಾಧಿತ ಜಾಗದಲ್ಲಿ ಯಾರೂ ಪ್ರವೇಶಿಸಬಾರದು ಎಂದು ಎಚ್ಚರಿಕೆ ನೀಡಿ ಈ ಬಗ್ಗೆ ಗ್ರಾಮ ಪಂಚಾಯಿತಿಯವರು ನಿಗಾವಹಿಸುವಂತೆ ಸೂಚಿಸಿದರು.
ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ಶ್ರೀನಿವಾಸ್, ಎಚ್.ಆರ್. ಅನಿಲ್‌ಕುಮಾರ್, ರಾಜು, ಸತೀಶ್, ಅನಿಲ್, ಮುನಿಯಪ್ಪ, ನಂಜಪ್ಪ, ಚಂದ್ರಶೇಖರ್ ಪಾಲ್ಗೊಂಡಿದ್ದರು.