Sidlaghatta : ನೀರು ಅತ್ಯಮೂಲ್ಯವಾದ ಸಂಪತ್ತು. ಅದನ್ನು ಮಿತವಾಗಿ ಬಳಸುವ ಮೂಲಕ ಜಲಸಂಪತ್ತನ್ನು ಸಂರಕ್ಷಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮೊಹಮ್ಮದ್ ರೋಷನ್ ಷಾ ಹೇಳಿದರು.
ತಾಲ್ಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘದ ವತಿಯಿಂದ ನ್ಯಾಯಾಲಯದ ಆವರಣದಲ್ಲಿನ ಗಿಡಗಳಿಗೆ ನೀರುಣಿಸುವ ಮೂಲಕ “ವಿಶ್ವ ಜಲ ದಿನ”ವನ್ನು ಆಚರಿಸಿ ಅವರು ಮಾತನಾಡಿದರು. “ನೀರಿನ ಮಹತ್ವವನ್ನು ನಿರ್ಲಕ್ಷಿಸಿದರೆ ಭವಿಷ್ಯದಲ್ಲಿ ಅಪಾರ ಸಮಸ್ಯೆ ಎದುರಾಗಲಿದೆ” ಎಂದು ಅವರು ಎಚ್ಚರಿಸಿದರು.
“ನೀರಿನ ಅವಶ್ಯಕತೆ ಮಾನವ, ಪ್ರಾಣಿ, ಪಕ್ಷಿ ಸೇರಿದಂತೆ ಪ್ರತಿಯೊಂದು ಜೀವಜಾತಿಗೆ ಅನಿವಾರ್ಯ. ಆಹಾರ ಉತ್ಪಾದನೆ, ಗಿಡಮರಗಳ ಬೆಳವಣಿಗೆ, ಪರಿಸರದ ಸಮತೋಲನಕ್ಕೆ ನೀರು ಅಮೃತದಂತೆ ಅಸ್ತಿತ್ವವಿದೆ. ಆದರೂ, ನೀರಿನ ಅತಿಯಾದ ಬಳಕೆ, ದುರ್ಬಳಕೆ ನಡೆಯುತ್ತಿರುವುದು ಆತಂಕಕಾರಿ ಸಂಗತಿ” ಎಂದು ಅವರು ವಿಷಾದ ವ್ಯಕ್ತಪಡಿಸಿದರು.
ಪ್ರಧಾನ ಸಿವಿಲ್ ನ್ಯಾಯಾಧೀಶೆ ಪೂಜಾ.ಜೆ ಮಾತನಾಡಿ, “ವಿಶ್ವ ಜಲ ದಿನವನ್ನು ವರ್ಷಕ್ಕೊಮ್ಮೆ ಮಾತ್ರ ಆಚರಿಸುವುದರಿಂದ ಸಾಕಾಗದು. ಜಲ ಸಂಪತ್ತಿನ ಮಹತ್ವವನ್ನು ನಮ್ಮ ವೃತ್ತಿ ಹಾಗೂ ದೈನಂದಿನ ಜೀವನದಲ್ಲಿ ಅಳವಡಿಸಿಕೊಂಡು ಪ್ರತಿದಿನವೂ ನೀರನ್ನು ಉಳಿಸುವ ಮನೋಭಾವ ಬೆಳೆಸಿಕೊಳ್ಳಬೇಕು” ಎಂದು ಸಲಹೆ ನೀಡಿದರು. “ಯುವ ಸಮೂಹ, ವಿದ್ಯಾರ್ಥಿಗಳಿಗೆ ನೀರಿನ ಮಹತ್ವ ಮತ್ತು ಜಲ ಮೂಲಗಳ ಸಂರಕ್ಷಣೆಯ ಕುರಿತು ಹೆಚ್ಚು ಜಾಗೃತಿ ಮೂಡಿಸುವ ಅಗತ್ಯವಿದೆ” ಎಂದರು.
ಈ ಸಂದರ್ಭದಲ್ಲಿ ವಕೀಲರ ಸಂಘದ ತಾಲ್ಲೂಕು ಅಧ್ಯಕ್ಷ ಎ. ನಾರಾಯಣಸ್ವಾಮಿ, ಕಾರ್ಯದರ್ಶಿ ಸಿ.ಜಿ. ಭಾಸ್ಕರ್, ವಕೀಲರ ಸಂಘದ ಪದಾಧಿಕಾರಿಗಳು ಮತ್ತು ಅನೇಕ ಹಿರಿಯ ವಕೀಲರು ಭಾಗವಹಿಸಿದ್ದರು.