Sidlaghatta : ಶಿಡ್ಲಘಟ್ಟದ ಸ್ತ್ರೀಶಕ್ತಿ ಭವನದಲ್ಲಿ ವಿಶ್ವ ಮಣ್ಣು ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಜಂಗಮಕೋಟೆಯ ಕೃಷಿ ಇಲಾಖೆ ಅಧಿಕಾರಿ ಶಿವಕುಮಾರ್ ಅವರು ಮಣ್ಣಿನ ಸಂರಕ್ಷಣೆಯ ಮಹತ್ವವನ್ನು ಒತ್ತಿಹೇಳಿದರು. “ನಮ್ಮ ಜೀವನವು ಮಣ್ಣಿನ ಪರಿಸರದಿಂದಲೇ ಆರಂಭವಾಗುತ್ತದೆ. ಮಣ್ಣಿನ ಫಲವತ್ತತೆಯನ್ನು ಉಳಿಸಿ ನಮ್ಮ ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ” ಎಂದು ಹೇಳಿದರು.
ಅಧಿಕ ಪ್ರಮಾಣದ ರಾಸಾಯನಿಕ ಬಳಕೆಯಿಂದ ಮಣ್ಣಿನ ಫಲವತ್ತತೆ ಹಾನಿಗೊಳಗಾಗಿದ್ದು, ಅದರ ಪರಿಣಾಮವನ್ನು ನಾವು ಮತ್ತು ಮುಂದಿನ ಪೀಳಿಗೆ ಅನುಭವಿಸಬೇಕಾಗುತ್ತದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು. “ಮಣ್ಣು ಮತ್ತು ಪರಿಸರವನ್ನು ಉಳಿಸಲು ಇಂದಿನಿಂದಲೇ ತಕ್ಷಣ ಕ್ರಮ ಕೈಗೊಳ್ಳಬೇಕು” ಎಂಬ ಸಂದೇಶ ನೀಡಿದರು.
ಸಾವಯವ ಕೃಷಿ ಪರಿವಾರದ ಸಂಚಾಲಕ ಬೂದಳ ರಾಮಾಂಜಿನಪ್ಪ ಅವರು ಮಾತನಾಡಿ, ಹೆಚ್ಚುವರಿ ಫಸಲು ಪಡೆಯಲು ರಾಸಾಯನಿಕ ಬಳಕೆಯಿಂದ ಆಹಾರ ಕಲುಷಿತವಾಗುತ್ತಿದ್ದು, ಅದು ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಎಂದು ವಿಷಾದಿಸಿದರು.
ಕಾರ್ಯಕ್ರಮದಲ್ಲಿ ಮಣ್ಣಿನ ಸಂರಕ್ಷಣೆಗೆ ಬದ್ಧತೆಯನ್ನು ವ್ಯಕ್ತಪಡಿಸುವ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಲಾಯಿತು. ಕಸಬಾ ಕೃಷಿ ಇಲಾಖೆ ಅಧಿಕಾರಿ ಪ್ರವೀಣ್, ರೇಷ್ಮೆ ಸಹಾಯಕ ನಿರ್ದೇಶಕ ಅಕ್ಮಲ್ ಪಾಷ, ಸಾದಲಿ ಕೃಷಿ ಇಲಾಖೆ ಅಧಿಕಾರಿ ಸುದರ್ಶನ್, ಪ್ರಗತಿಪರ ರೈತ ಚಿಂತಡಿಪಿ ಶಾಂತ್ ಕುಮಾರ್, ಹೂಜಗೂರು ವೆಂಕಟರಾಯಪ್ಪ, ರತ್ನಮ್ಮ ಮತ್ತಿತರರು ಭಾಗವಹಿಸಿದ್ದರು.