Kakachokkandahalli, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಅತಿದೊಡ್ಡ ಕೆರೆಗಳಲ್ಲಿ ಒಂದಾದ ಭದ್ರನ ಕೆರೆಯಲ್ಲಿನ ಬಿದಿರು ಮೆಳೆಗೆ ಗುರುವಾರ ಬೆಂಕಿ ಬಿದ್ದಿದ್ದು, ಚಿಕ್ಕಬಳ್ಳಾಪುರ ದೇವನಹಳ್ಳಿ ಮತ್ತು ಶಿಡ್ಲಘಟ್ಟದ ಸುಮಾರು 40 ಮಂದಿ ಅರಣ್ಯ ಇಲಾಖೆ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸಪಟ್ಟರು.
ಸುಮಾರು 840 ಎಕರೆ ವಿಸ್ತೀರ್ಣವಿರುವ ಅಮಾನಿ ಭದ್ರನ ಕೆರೆಯ ಅಚ್ಚುಕಟ್ಟಿನಲ್ಲಿ ಹದಿಮೂರು ಹಳ್ಳಿಗಳಿವೆ. ಕಾಕಚೊಕ್ಕಂಡಹಳ್ಳಿ ಹಾಗೂ ಅಂಕತಟ್ಟಿ ಬಳಿ ಬೆಂಕಿ ಬಿದ್ದು ಧಗಧಗಿಸಿ ಕೆನ್ನಾಲಿಗೆ ಚಾಚಿ ಹೊತ್ತಿ ಉರಿಯುತ್ತಿದ್ದ ಬಿದಿರು ಮೆಳೆಯಿಂದ ಹೊರಹೊಮ್ಮುತ್ತಿದ್ದ ಹೊಗೆ ಬಹು ದೂರದವರೆಗೂ ಕಾಣಿಸುತ್ತಿತ್ತು.
“ಸುಮಾರು ಹತ್ತು ಎಕರೆ ಪ್ರದೇಶದಷ್ಟು ಹುಲ್ಲು ಮತ್ತು ಬಿದಿರು ಮೆಳೆ ಬೆಂಕಿಗೆ ಆಹುತಿಯಾಗಿದೆ. ಅದರಲ್ಲಿದ್ದಿರಬಹುದಾದ ಜಿಂಕೆ, ನವಿಲು ಮುಂತಾದವುಗಳಿಗೂ ಬೆಂಕಿ ತಗುಲಿರಬಹುದು ಮತ್ತು ಕೆಲವು ಪ್ರಾಣಿಗಳು ಹೊರಕ್ಕೆ ಓಡಿ ಹೋಗಿರಬಹುದು. ಬೇಸಿಗೆಯಲ್ಲಿ ಬೆಂಕಿ ಅನಾಹುತ ತಡೆಯಬೇಕೆಂದು ಜಂಗಮಕೋಟೆ ಭಾಗದಲ್ಲಿ ಅರಿವು ಮೂಡಿಸುವ ಜಾಥಾ ಕೂಡ ಮಾಡಿ ಬಂದಿದ್ದೆವು. ಬೆಂಕಿ ಬಿದ್ದಾಗ ಪ್ರಾಣಿಗಳು ತೋಟಗಳಿಗೆ ನುಗ್ಗಿ ಬೆಳೆ ಹಾಳು ಮಾಡುತ್ತವೆ. ಬೇಸಿಗೆಯಲ್ಲಿ ಜನರು ಬಹಳ ಜಾಗೃತರಾಗಿರಬೇಕು” ಎಂದು ವಲಯ ಅರಣ್ಯಾಧಿಕಾರಿ ಸುಧಾಕರ್ ತಿಳಿಸಿದರು.