Sidlaghatta : ಶಿಡ್ಲಘಟ್ಟ ನಗರದ ಹೂವಿನ ವೃತ್ತದಲ್ಲಿ ಶ್ರೀ ವೇಣುಗೋಪಾಲಸ್ವಾಮಿ ದೇವಾಲಯಕ್ಕೆ (Venugopalaswamy Temple) ಸೇರಿದ ಜಾಗದಲ್ಲಿ ರಾತ್ರೋರಾತ್ರಿ ಅನಧಿಕೃತವಾಗಿ ತಲೆ ಎತ್ತಿದ್ದ ಅಂಗಡಿ ಮಳಿಗೆಯನ್ನು ನಗರಸಭೆಯ ಪೌರಾಯುಕ್ತ ಶ್ರೀಕಾಂತ್ ನೇತೃತ್ವದಲ್ಲಿ ತೆರವುಗೊಳಿಸಲಾಯಿತು.
ನಗರದ ಹೃದಯ ಭಾಗದಲ್ಲಿರುವ ಹೂವಿನ ವೃತ್ತದಲ್ಲಿ ಮುಜರಾಯಿ ಇಲಾಖೆಗೆ ಸೇರಿದ ಶ್ರೀ ವೇಣುಗೋಪಾಲ ಸ್ವಾಮಿ ದೇವಾಲಯಕ್ಕೆ ಸೇರಿದ ಹೂವಿನ ವೃತ್ತದ ಬಳಿಯಲ್ಲಿ ರಾತ್ರೋರಾತ್ರಿ ದಿಡೀರನೇ ಅಂಗಡಿ ಮಳಿಗೆ ನಿರ್ಮಾಣವಾಗಿತ್ತು. ಹೀಗೆ ರಾತ್ರೋರಾತ್ರಿ ನಿರ್ಮಾಣವಾದ ಅಂಗಡಿ ಬಗ್ಗೆ ಹೂ ಮಾರುವರು ತಹಶೀಲ್ದಾರ್ ರಾಜೀವ್ ರವರ ಗಮನಕ್ಕೆ ಹಾಗೂ ನಗರಸಭೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.
ಈ ಜಾಗದಲ್ಲಿ ನೂರಾರು ವರ್ಷಗಳಿಂದ ಕೆಲವರು ಹೂವಿನ ವ್ಯಾಪಾರ ಮಾಡುತ್ತಿರುವುದಾಗಿ ತಹಶೀಲ್ದಾರ್ ರವರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ದೂರಿನ ಮೇರೆಗೆ ನಗರಸಭೆ ಪೌರಾಯುಕ್ತ ಶ್ರೀಕಾಂತ್ ಅವರ ನೇತೃತ್ವದಲ್ಲಿ ನಗರಸಭೆ ಸಿಬ್ಬಂದಿ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಅಂಗಡಿ ಮಳಿಗೆಯನ್ನು ತೆರವು ಗೊಳಿಸುವ ಮೂಲಕ ಶ್ರೀ ವೇಣುಗೋಪಾಲ ಸ್ವಾಮಿ ದೇವಾಲಯದ ಆಸ್ಥಿಯನ್ನು ಉಳಿಸಿದ್ದಾರೆ.