Veerapura, Sidlaghatta : ಮಕ್ಕಳ ದಿನಾಚರಣೆ ಸೇರಿದಂತೆ ಯಾವುದೆ ದಿನಾಚರಣೆಗಳನ್ನು ಸುಖಾ ಸುಮ್ಮನೆ ಆಚರಿಸಬಾರದು, ಅರ್ಥಪೂರ್ಣವಾಗಿ ಆಚರಿಸುವಂತಾಗಬೇಕು. ಎಲ್ಲ ದಿನಾಚರಣೆಗಳು ಕೂಡ ಬದಲಾವಣೆಗೆ ಕಾರಣ ಆಗುವಂತೆ ಆಚರಿಸಬೇಕು ಎಂದು ಕ್ರೆಡಿಟ್ ಆಕ್ಸೀಸ್ ಗ್ರಾಮೀಣ ಸಂಸ್ಥೆಯ ಪ್ರಾದೇಶಿಕ ವ್ಯವಸ್ಥಾಪಕ ಮಂಜೇಗೌಡ ತಿಳಿಸಿದರು.
ತಾಲ್ಲೂಕಿನ ವೀರಾಪುರ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಕ್ರೆಡಿಟ್ ಆಕ್ಸೀಸ್ ಗ್ರಾಮೀಣ ಸಂಸ್ಥೆಯಿಂದ ಸಂಸ್ಥೆಯ ಸಾಮಾಜಿಕ ಅಭಿವೃದ್ದಿ ಕಾರ್ಯಕ್ರಮದಡಿ ಮಕ್ಕಳಿಗೆ ಕ್ರೀಡಾ ಉಪಕರಣಗಳನ್ನು ವಿತರಿಸಿ ಮಾತನಾಡಿದರು.
ಮಕ್ಕಳಲ್ಲಿ ಧನಾತ್ಮಕ ಚಿಂತನೆಗಳನ್ನು ಬೆಳೆಸುವಂತ, ವಯುಕ್ತಿಕ ಹಿತಾಸಕ್ತಿ ಬಿಟ್ಟು ಸಮಾಜದ ಹಿತವನ್ನು ಬಯಸುವಂತ ಮನೋಭಾವವನ್ನು ಬೆಳೆಸಬೇಕು. ಅದಕ್ಕೆ ನಮ್ಮ ಮಕ್ಕಳಿಗೆ ಸ್ವಾತಂತ್ರ್ಯ ಹೋರಾಟಗಾರರು, ಸಮಾಜ ಸುಧಾರಕರು, ಸಾಧು ಸಂತರ, ಸಾಧಕರ ಬದುಕನ್ನು ತಿಳಿಸಿಕೊಡುವ ಕೆಲಸ ಆಗಬೇಕಿದೆ ಎಂದರು.
ಕ್ರೆಡಿಟ್ ಆಕ್ಸೀಸ್ ಗ್ರಾಮೀಣ ಸಂಸ್ಥೆಯಿಂದ ಸಾಮಾಜಿಕ ಅಭಿವೃದ್ದಿ ಕಾರ್ಯಕ್ರಮದಡಿ ಆಟದ ಸಾಮಗ್ರಿಗಳನ್ನು ಅಂಗನವಾಡಿ ಮಕ್ಕಳಿಗೆ ವಿತರಿಸಲಾಯಿತು. ಸಿಹಿ ಹಂಚಿ ಮಕ್ಕಳ ದಿನಾಚರಣೆಯ ಮಹತ್ವವನ್ನು ವಿವರಿಸಲಾಯಿತು.
ಕ್ರೆಡಿಟ್ ಆಕ್ಸೀಸ್ ಗ್ರಾಮೀಣ ಸಂಸ್ಥೆಯ ವ್ಯವಸ್ಥಾಪಕ ಚಂದ್ರಶೇಖರ್, ಗ್ರಾಮ ಪಂಚಾಯಿತಿ ಸದಸ್ಯೆ ರತ್ನಮ್ಮ, ಅಂಗನವಾಡಿ ಶಿಕ್ಷಕಿ ಶೋಭಾವೆಂಕಟೇಶ್, ಸಹಾಯಕಿ ವಿಶಾಲಾಕ್ಷಿ, ಗ್ರಾಮಸ್ಥರಾದ ಪದ್ಮಮ್ಮ, ಸುಮಿತ್ರ, ನಯನ, ಮುನಿಯಮ್ಮ, ಪುಷ್ಪ ಇನ್ನಿತರರು ಹಾಜರಿದ್ದರು.