Varadanayakanahalli, Sidlaghatta : ಮಕ್ಕಳ ಮೇಲೆ ದೌರ್ಜನ್ಯವಾದಾಗ ಅದನ್ನು ಮುಚ್ಚಿಡದೆ ಧೈರ್ಯವಾಗಿ ಹೇಳಿಕೊಳ್ಳಬೇಕು ಮತ್ತು ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮೊಹಮ್ಮದ್ ರೋಷನ್ ಷಾ ಅಭಿಪ್ರಾಯಪಟ್ಟರು.
ತಾಲೂಕಿನ ವರದನಾಯಕನಹಳ್ಳಿ ಸರಕಾರಿ ಶಾಲೆಯಲ್ಲಿ, ಮಕ್ಕಳ ದಿನಾಚರಣೆಯ ಪ್ರಯುಕ್ತ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
“ಸ್ನೇಹಿತರು, ಸಂಬಂಧಿಕರು ಅಥವಾ ಶಿಕ್ಷಕರಾದರೂ ಲೈಂಗಿಕವಾಗಿ ಪ್ರಚೋದಿಸುವ ಅಥವಾ ಮುಜುಗರ ಉಂಟುಮಾಡುವ ರೀತಿಯಲ್ಲಿ ವರ್ತಿಸಿದಾಗ, ಅದನ್ನು ಧೈರ್ಯವಾಗಿ ಎದುರಿಸಿ ಹೇಳಿಕೊಳ್ಳಬೇಕು. ಈ ಹಿಂದೆ ನಡೆದ ಘಟನೆಯನ್ನು ತಕ್ಷಣವೇ ಮುಚ್ಚಿಟ್ಟರೆ, ಅದರ ಮರುಕಳಿಯುವ ಸಾಧ್ಯತೆ ಹೆಚ್ಚಾಗುತ್ತದೆ. ಬಾಲಕಿಯರು ತಮ್ಮ ಮನೆಯವರಿಗಾಗಲಿ ಅಥವಾ ಶಿಕ್ಷಕರಿಗೆ ಈ ವಿಚಾರವನ್ನು ತಕ್ಷಣವೇ ಹೇಳಿ ಪರಿಹಾರ ಕಂಡುಕೊಳ್ಳಬೇಕು,” ಎಂದರು.
“೧೮ ವರ್ಷದೊಳಗಿನ ಎಲ್ಲರೂ ಮಕ್ಕಳಾಗಿದ್ದಾರೆ. ಮಕ್ಕಳಿಗೆ ಉತ್ತಮ ಆಹಾರ, ಶಿಕ್ಷಣ, ಮತ್ತು ರಕ್ಷಣೆಯ ಹಕ್ಕುಗಳನ್ನು ನೀಡಲು ಸರ್ಕಾರ ಮಾತ್ರವಲ್ಲ, ಪ್ರತಿಯೊಬ್ಬರೂ ತಮ್ಮ ಪಾತ್ರ ನಿರ್ವಹಿಸಬೇಕು. ಮಕ್ಕಳ ದಿನಾಚರಣೆಯನ್ನು ಕೇವಲ ಆಚರಿಸುವಷ್ಟರಲ್ಲಿ ನಿಲ್ಲದೆ, ಅವರಿಗೆ ಇರುವ ಕಾನೂನಾತ್ಮಕ ಹಕ್ಕುಗಳು ಮತ್ತು ಸವಲತ್ತುಗಳ ಕುರಿತು ಜಾಗೃತಿ ಮೂಡಿಸಬೇಕು,” ಎಂದು ಅವರು ತಿಳಿಸಿದರು.
ಶಾಲಾ ಮುಖ್ಯ ಶಿಕ್ಷಕಿ ಶಾಮಲ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಸಿವಿಲ್ ನ್ಯಾಯಾಧೀಶೆ ಜೆ. ಪೂಜಾ, ಬಿಇಒ ನರೇಂದ್ರ ಕುಮಾರ್, ಸಿಡಿಪಿಒ ವಿದ್ಯಾ ಎ. ವಸ್ತ್ರದ್, ವಕೀಲರ ಸಂಘದ ಅಧ್ಯಕ್ಷ ಎ. ನಾರಾಯಣಸ್ವಾಮಿ, ಕಾರ್ಯದರ್ಶಿ ಸಿ.ಜಿ. ಭಾಸ್ಕರ್, ಎಸ್‌ಡಿಎಂಸಿ ಅಧ್ಯಕ್ಷ ಗಂಗಾಧರ್, ಮಾಜಿ ಅಧ್ಯಕ್ಷ ಗೋಪಾಲಕೃಷ್ಣ, ಶಿಕ್ಷಕ ನಾಗಭೂಷಣ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.