ಶಿಡ್ಲಘಟ್ಟ ನಗರದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಗುರುವಾರ ಆರೋಗ್ಯ ಮತ್ತು ಕುಟುಂಬಕಲ್ಯಾಣ ಇಲಾಖೆಯಿಂದ ವಿಶ್ವ ಕ್ಷಯರೋಗ ದಿನಾಚರಣೆಯ ಅಂಗವಾಗಿ ಹೊರಟ ಜಾಥಾಗೆ ಚಾಲನೆ ನೀಡಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಮಾತನಾಡಿದರು.
ಕ್ಷಯರೋಗ ಒಂದು ಮಾರಾಣಾಂತಿಕ ಕಾಯಿಲೆಯಲ್ಲ, ಸರ್ಕಾರಿ ಆಸ್ಪತ್ರೆಗಳಲ್ಲಿ ಸೂಕ್ತ ಉಚಿತ ಚಿಕಿತ್ಸೆ ಲಭ್ಯವಿದ್ದು ರೋಗದ ಲಕ್ಷಣಗಳು ಕಾಣಿಸಿಕೊಂಡವರು ತಕ್ಷಣ ಸಮೀಪದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದು ಅವರು ಹೇಳಿದರು.
ಈ ಹಿಂದೆ ಕ್ಷಯ ರೋಗಕ್ಕೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇದೀಗ ರೋಗ ಹೆಚ್ಚಿರುವ ಸ್ಥಳಗಳನ್ನು ಗುರುತಿಸಿ ರೋಗಿಗಳ ಮನೆಗೆ ಹೋಗಿ ಸೂಕ್ತ ಔಷಧಿ ನೀಡುವ ಕಾರ್ಯ ಪ್ರಾರಂಭವಾಗಿದೆ. ರೋಗವನ್ನು ಪ್ರಾಥಮಿಕ ಹಂತದಲ್ಲಿಯೇ ಗುರುತಿಸಿ, ರೋಗಿಗೆ ಸೂಕ್ತ ಮಾರ್ಗದರ್ಶನ ಮತ್ತು ಚಿಕಿತ್ಸೆ ನೀಡುವ ಮೂಲಕ ಕ್ಷಯರೋಗವನ್ನು ನಿಯಂತ್ರಿಸುವ ಉದ್ದೇಶದಿಂದ ಆರಂಭಿಸಿರುವ ಈ ಕಾರ್ಯಕ್ರಮಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ ಎಂದು ಹೇಳಿದರು.
ಕ್ಷಯರೋಗ ಬಂದಿದೆ ಎನ್ನುವ ಕೀಳರಿಮೆಯನ್ನು ಬಿಟ್ಟು, ರೋಗವನ್ನು ನಿಯಂತ್ರಣ ಮಾಡಿಕೊಳ್ಳುವುದರ ಜೊತೆಗೆ, ರೋಗಗಳು ಹರಡದಂತೆ ಮುಂಜಾಗ್ರತೆ ವಹಿಸುವುದು ಸೂಕ್ತ. ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗ ಪತ್ತೆ ಮಾಡಲು ಪರೀಕ್ಷೆಗಳು ಹಾಗೂ ಚಿಕಿತ್ಸೆ ಸಂಪೂರ್ಣವಾಗಿ ಉಚಿತವಾಗಿರುತ್ತದೆ. ವೈದ್ಯರೊಂದಿಗೆ ನಿಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳುವಾಗ ಮುಜುಗರ ಪಡೆದೆ ರೋಗಗಳನ್ನು ನಿಯಂತ್ರಣ ಮಾಡಿಕೊಳ್ಳಬೇಕು.
ತಾಲ್ಲೂಕಿನಾದ್ಯಂತ ಪ್ರಸಕ್ತ 279 ಪ್ರಕರಣಗಳ ಪೈಕಿ ಎಲ್ಲರಿಗೂ ಚಿಕಿತ್ಸೆ ನೀಡಲಾಗುತ್ತಿದ್ದು, ತಾಲ್ಲೂಕಿನ ಸಾದಲಿ ಮತ್ತು ದೊಡ್ಡತೇಕಹಳ್ಳಿ ಗ್ರಾಮ ಪಂಚಾಯಿತಿಗಳನ್ನು ಕ್ಷಯರೋಗ ಮುಕ್ತ ಪಂಚಾಯಿತಿಗಳನ್ನಾಗಿಸುವ ನಿಟ್ಟಿನಲ್ಲಿ ಹೆಚ್ಚು ಹೆಚ್ಚು ಪರೀಕ್ಷೆಗಳನ್ನು ನಡೆಸುವ ಮೂಲಕ ಆರೋಗ್ಯ ಸಿಬ್ಬಂದಿ ಶ್ರಮಿಸುತ್ತಿದ್ದಾರೆ. ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದರು.
ಸಾರ್ವಜನಿಕ ಆಸ್ಪತ್ರೆಯ ಡಾ.ಗುರು, ಡಾ.ಸೋನಾಲಿ, ಡಾ.ಭರತ್, ಡಾ.ಭವನ, ಡಾ.ಜಾನ್ಸಿ, ಡಾ.ರಾಘವೇಂದ್ರ, ಆರೋಗ್ಯ ಸಿಬ್ಬಂದಿ ಲೋಕೇಶ್, ದೇವರಾಜ್, ಮುನಿರತ್ನಮ್ಮ, ನಂದಿನಿ, ಚೈತ್ರಾ. ಮಧು, ಗೀತಾ ಹಾಜರಿದ್ದರು.