ರೈಲ್ವೆ ಹಳಿ ಮೇಲೆ ಕುಳಿತು ಮದ್ಯಪಾನ ಮಾಡುತ್ತಿದ್ದಾಗ ಬಂದ ತಪಾಸಣಾ ರೈಲು ಗಾಡಿ (ಎಂಜಿನ್ ಹಾಗೂ ಒಂದು ಬೋಗಿ) ಸಿಲುಕಿ ಒಬ್ಬ ಸ್ಥಳದಲ್ಲೆ ಮೃತಪಟ್ಟರೆ, ಇನ್ನೊಬ್ಬನ ತಲೆಗೆ ಗಂಭೀರ ಗಾಯವಾಗಿದ್ದು ಆತನ ಸ್ಥಿತಿ ಚಿಂತಾಜನಕವಾಗಿದೆ.
ಮೃತಪಟ್ಟವನ ವಯಸ್ಸು 50 ಆಗಿದ್ದು ಹೆಸರು ಊರು ಹೆಚ್ಚಿನ ವಿವರ ತಿಳಿದಿಲ್ಲ. ರಾಮನಗರ ಮೂಲದವರೆಂದು ಹೇಳಲಾಗುತ್ತಿದ್ದು ರೇಷ್ಮೆನೂಲು ಬಿಚ್ಚಾಣಿಕೆಯ ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.
ಗಂಭೀರವಾಗಿ ಗಾಯಗೊಂಡಿದ್ದ ಸಾದಿಕ್(45)ನ್ನು ಶಿಡ್ಲಘಟ್ಟದ ವಾಸಿ ಎಂದು ಗುರ್ತಿಸಲಾಗಿದ್ದು, ಈತನೂ ಸಹ ರೇಷ್ಮೆನೂಲು ಬಿಚ್ಚಾಣಿಕೆ ಕೂಲಿ ಕಾರ್ಮಿಕನಾಗಿದ್ದು, ಮೃತ ವ್ಯಕ್ತಿ ಹಾಗೂ ಸಾದಿಕ್ ಪರಸ್ಪರ ಪರಿಚಿತರು. ಗಂಭೀರವಾಗಿ ಗಾಯಗೊಂಡ ಸಾದಿಕ್‌ನನ್ನು ಹೆಚ್ಚಿನ ಚಿಕಿತ್ಸೆಗೆಂದು ಬೆಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಸಂಜೆ ನಂತರ ರೈಲು ಸಂಚರಿಸುವುದಿಲ್ಲ. ಹಾಗಾಗಿ ಸಂಜೆ ನಂತರ ರೈಲ್ವೆ ನಿಲ್ದಾಣದ ಆವರಣದಲ್ಲಿ ಅಲ್ಲಲ್ಲಿ ಗುಂಪು ಗುಂಪಾಗಿ ಕುಳಿತು ಮದ್ಯಪಾನ ಮಾಡುವುದು ಇಲ್ಲಿ ಸಹಜವಾಗಿದೆ.
ಹಾಗೆಯೆ ಸಾದಿಕ್ ಹಾಗೂ ಮೃತವ್ಯಕ್ತಿಯು ರೈಲ್ವೆ ಹಳಿಗಳ ಮೇಲೆ ಕುಳಿತು ಮದ್ಯಪಾನ ಮಾಡುತ್ತಿದ್ದಾಗ ತಪಾಸಣಾ ರೈಲು ಬಂದಿದ್ದು ಹಾರ್ನ್ ಮಾಡಿದ್ದರೂ ಮದ್ಯದ ಅಮಲಿನಲ್ಲಿದ್ದು ಅವರು ಅಲ್ಲಿಂದ ಎದ್ದೇಳುವುದು ತಡವಾಗಿದ್ದು ಅಪಘಾತವಾಗಿದೆ.