Melur, Sidlaghatta : ದಸರಾ ಬಂತೆಂದರೆ ಗೊಂಬೆ ಕೂರಿಸುವ ಸಂಭ್ರಮ, ಅಟ್ಟವೇರಿರುವ ಗೊಂಬೆ ತೆಗೆಯುವ ಉತ್ಸಾಹ, ಆ ಬೊಂಬೆಗಳಿಗೆ ಉಡುಗೆ ತೊಡಿಸಿ ಮಾಡುವ ಶೃಂಗಾರ, ಹಂತ ಹಂತವಾಗಿ ಬೊಂಬೆ ಜೋಡಿಸುವ ಸಡಗರ.
ಆಶ್ವಯುಜ ಶುದ್ಧ ಪಾಡ್ಯದಿಂದ ದಶಮಿಯವರೆಗೆ ಹತ್ತು ದಿನಗಳ ಕಾಲ ನಡೆಯುವ ದಸರಾ ಹಬ್ಬದ ಸಂದರ್ಭದಲ್ಲಿ ಮೈಸೂರಿನ ಅರಮನೆ ಸಂಪ್ರದಾಯವನ್ನು ಅನುಸರಿಸಿ ಸಾಮಾಜಿಕ ಹಾಗು ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸಲು ಗೊಂಬೆಹಬ್ಬವನ್ನು ತಾಲ್ಲೂಕಿನಲ್ಲಿಯೂ ಹಲವಾರು ಮಂದಿ ಆಚರಿಸುವರು.
ತಾಲ್ಲೂಕಿನ ಮೇಲೂರಿನ ಗ್ರಾಮ ಪಂಚಾಯಿತಿ ಸದಸ್ಯ ಎಂ.ಕೆ.ರವಿ ಪ್ರಸಾದ್ ಅವರ ಮನೆಯಲ್ಲಿ ಪುರಾಣ ಕಥೆಗಳನ್ನು ಪುನ: ಸೃಷ್ಟಿಸುವ ರೀತಿಯಲ್ಲಿ, ದಸರಾ ಗೊಂಬೆಗಳ ಮೂಲಕ ನಮ್ಮ ನಾಡಿನ ಜನಪದ, ಸಾಂಸ್ಕೃತಿಕ ವೈವಿಧ್ಯತೆಯನ್ನು ಸಾರುತ್ತಾರೆ.
ಸುಮಾರು ಮೂರು ತಲೆಮಾರುಗಳಿಂದ ಇವರ ಮನೆಯಲ್ಲಿನ ಈ ದಸರಾ ಗೊಂಬೆ ಹಬ್ಬದ ಆಚರಣೆ ನಡೆಸಿಕೊಂಡು ಬರಲಾಗಿದೆ. ವೈವಿಧ್ಯಮಯ ಗೊಂಬೆಗಳು, ಅವನ್ನು ಜೋಡಿಸಿಟ್ಟ ರೀತಿ ಅತ್ಯಂತ ಆಕರ್ಷಕವಾಗಿದೆ.
ಪಟ್ಟದ ಗೊಂಬೆ, ಅಮ್ಮನವರ ಮೂರ್ತಿ, ಬೆಣಚುಕಲ್ಲಿನ ಗಣಪತಿ, ಕಾಮಧೇನು, ಹುತ್ತದಲ್ಲಿ ಮಲಗಿರುವ ವೆಂಕಟೇಶ್ವರನಿಗೆ ಹಾಲು ನೀಡುತ್ತಿರುವ ಗೋಮಾತೆ, ರಾಘವೇಂದ್ರರು, ದಶಾವತಾರ, ಮುವ್ವತ್ತು ವರ್ಷಗಳ ಹಿಂದಿನ ರಾಮ ಮತ್ತು ಕೃಷ್ಣರ ಅಪರೂಪದ ಮೂರ್ತಿಗಳು, ಶೆಟ್ಟಪ್ಪ ಶೆಟ್ಟಮ್ಮ, ಅವರ ಅಂಗಡಿಗೆ ದಿನಸಿ ತರುವ ಗಾಡಿ, ಹಣ್ಣು ತರುವವರು, ಈಶ್ವರನ ಅಭಿಷೇಕಕ್ಕೆ ಗಣಪತಿಯ ವಾದ್ಯಗೋಷ್ಠಿ, ರಾಮ ಗುಹನೊಂದಿಗೆ ವನವಾಸಕ್ಕೆ ತೆರಳುದ ದೃಶ್ಯ, ಶಬರಿ ರಾಮನಿಗೆ ಹಣ್ಣು ತಿನ್ನಿಸುವುದು, ರಾಮನ ತೊಡೆಯ ಮೇಲೆ ಮಲಗಿದ ಲಕ್ಷ್ಮಣ, ಸಂಜೀವಿನಿ ತರುತ್ತಿರುವ ಹನುಮಂತ, ಬೆಣ್ಣೆ ಕದಿಯುವ ಕೃಷ್ಣ, ಗೊಪಿಕಾ ಸ್ತ್ರೀಯರ ಜತೆ ಆಡುತ್ತಿರುವ ಕೃಷ್ಣ, ಮದುವೆ, ಮದುವೆ ಊಟ, ಹೆಣ್ಣಿನ ದೈನಂದಿನ ಕಾಯಕ, ಒಂಟೆ, ಕುದುರೆ, ಚನ್ನಪಟ್ಟಣದ ಬೊಂಬೆಗಳು, ವಿವಿಧ ದೇಶವಾಸಿಗಳ ದಿರಿಸುಗಳು, ಯೋಧರು, ಬುಡಕಟ್ಟು ಜನರು, ಮೈಸೂರು ಅರಮನೆ, ಬದರಿನಾಥ, ಕೇದಾರನಾಥ, ಅಯೋಧ್ಯೆಯ ಬಾಲರಾಮ, ಜಟಾಯು ಮತ್ತು ಶ್ರೀರಾಮರ ಮಿಲನ, ವಿವಿಧ ಕಸುಬುಗಳ ಜನರು … ಹೀಗೆ ಗೊಂಬೆಗಳನ್ನು ವಿಶಿಷ್ಟವಾಗಿ ಜೋಡಿಸಿದ್ದಾರೆ.
“ನಮ್ಮ ಮನೆಯಲ್ಲಿ ಹೆಣ್ಣುಮಕ್ಕಳು ಗೊಂಬೆ ಜೋಡಿಸಿಟ್ಟಿದ್ದು, ಮನೆಗೆ ಬಂದವರಿಗೆ ಹಬ್ಬದ ಸಿಹಿ ತಿಂಡಿ ನೀಡುತ್ತಾರೆ. ನಮ್ಮ ತಲೆಮಾರಿನ ಈ ಗೊಂಬೆಗಳೊಂದಿಗಿನ ನಂಟು, ಪ್ರೀತಿ ನನ್ನ ಸೊಸೆ ದಿವ್ಯಾ ಮತ್ತು ಮೊಮ್ಮಕ್ಕಳಾದ ಕುಶಲ ಮತ್ತು ಚಿರಾಗ್ ಅವರಿಗೂ ಮುಂದುವರೆದಿರುವುದು ಸಂತಸ ತಂದಿದೆ” ಎಂದು ಹಿರಿಯರಾದ ಅಶ್ವತ್ಥಮ್ಮ ಹೇಳಿದರು.
“ದಸರಾ ಹಬ್ಬದ ಸಂದರ್ಭದಲ್ಲಿ ಹಲವಾರು ವರ್ಷಗಳಿಂದಲ್ಲೂ ಗೊಂಬೆಗಳನ್ನಿಡುವ ಸಂಪ್ರದಾಯವಿದೆ. ನಮ್ಮಜ್ಜಿ ಗೊಂಬೆ ಇಡುವುದನ್ನು ನಮಗೆ ಕಲಿಸಿಕೊಟ್ಟರು. ಮಕ್ಕಳು ಜೊತೆಗೂಡುತ್ತಾರೆ. ಎಲ್ಲರೂ ಕಲೆತು ಗೊಂಬೆಗಳನ್ನು ಜೋಡಿಸುವ ಸಂಭ್ರಮ ಸದಾ ನೆನಪಿನಲ್ಲಿ ಉಳಿಯುತ್ತದೆ” ಎಂದು ಮೇಲೂರು ಗ್ರಾಮ ಪಂಚಾಯಿತಿ ಸದಸ್ಯ ಎಂ.ಕೆ.ರವಿಪ್ರಸಾದ್ ತಿಳಿಸಿದರು.