ಸತತವಾಗಿ ಎದುರಾದ ಬರಗಾಲ, ಅತಿವೃಷ್ಟಿ ಜತೆಗೆ ಕೊರೊನಾ ಸಂಕಷ್ಟದಿಂದಾಗಿ ತತ್ತರಿಸಿದ್ದ ರೈತರು, ಮಹಿಳಾ ಸ್ವ ಸ್ವ ಸಹಾಯ ಸಂಘಗಳ ಪಾಲಿಗೆ ಡಿಸಿಸಿ ಬ್ಯಾಂಕ್‌ನ ಬಡ್ಡಿರಹಿತ ಸಾಲ ವರದಾನವಾಗಿದೆ ಎಂದು ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎ.ನಾಗರಾಜ್ ತಿಳಿಸಿದರು.
ನಗರದಲ್ಲಿನ ಎಸ್‌ಎಫ್‌ಸಿಎಸ್ ಬ್ಯಾಂಕ್‌ನ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹಿಳಾ ಸಂಘಗಳ ಸದಸ್ಯರಿಗೆ ಡಿಸಿಸಿ ಬ್ಯಾಂಕ್‌ನಿಂದ ಸಾಲ ಹಾಗೂ ಎಟಿಎಂ ಕಾರ್ಡ್‌ಗಳನ್ನು ವಿತರಣೆ ಮಾಡಿ ಅವರು ಮಾತನಾಡಿದರು.
ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಯಾವೊಂದು ವಾಣಿಜ್ಯ ಬ್ಯಾಂಕು ಸಹ ನೀಡದಷ್ಟು ದೊಡ್ಡ ಪ್ರಮಾಣದಲ್ಲಿ ಡಿಸಿಸಿ ಬ್ಯಾಂಕ್‌ನಿಂದ ಮಹಿಳಾ ಸ್ವ ಸಹಾಯ ಸಂಘಗಳು ಹಾಗೂ ರೈತರಿಗೆ ಬಡ್ಡಿರಹಿತ ಸಾಲವನ್ನು ನೀಡಲಾಗುತ್ತಿದೆ ಎಂದರು.
ಇದರಿಂದ ಅನೇಕ ಕುಟುಂಬಗಳು ಆರ್ಥಿಕವಾಗಿ ಚೇತರಿಸಿಕೊಂಡು ಬದುಕನ್ನು ಕಟ್ಟಿಕೊಳ್ಳಲು ನೆರವಾಗುತ್ತಿದೆ, ಶಿಡ್ಲಘಟ್ಟ ಎಸ್‌ಎಫ್‌ಸಿಎಸ್ ಬ್ಯಾಂಕ್ ವ್ಯಾಪ್ತಿಯಲ್ಲಿ ಇದುವರೆಗೂ 20 ಕೋಟಿ ರೂ.ಗಳ ಸಾಲವನ್ನು ಬಡ್ಡಿರಹಿತವಾಗಿ ನೀಡಲಾಗಿದೆ ಎಂದು ವಿವರಿಸಿದರು.
42 ಸ್ವ ಸಹಾಯ ಸಂಘಗಳಿಗೆ 2.03 ಕೋಟಿ ರೂ.ಗಳ ಸಾಲವನ್ನು ಹಾಗೂ ಎಟಿಎಂ ಕಾರ್ಡುಗಳನ್ನು ವಿತರಿಸಲಾಯಿತು.
ಶಿಡ್ಲಘಟ್ಟ ಟೌನ್ ಎಸ್‌ಎಫ್‌ಸಿಎಸ್ ಬ್ಯಾಂಕ್‌ನ ಅಧ್ಯಕ್ಷ ರಾಮಚಂದ್ರಪ್ಪ, ಉಪಾಧ್ಯಕ್ಷೆ ಶೋಭರಾಣಿ, ನಿರ್ದೇಶಕರಾದ ಬಿ.ನಾರಾಯಣಸ್ವಾಮಿ, ಪ್ರಭಾವತಿವೇಣುಗೋಪಾಲ್, ವೆಂಕಟೇಶಪ್ಪ, ನರಸಿಂಹಯ್ಯ, ನಾರಾಯಣಪ್ಪ, ನಳಿನಾಶಿಶಿಕುಮಾರ್, ಪ್ರಶಾಂತ್, ಮಂಜುನಾಥ್, ಸಿಇಒ ದೇವಿಕ ಹಾಜರಿದ್ದರು.