ಶಿಡ್ಲಘಟ್ಟ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ಬಿ.ಸಿ.ನಂದೀಶ್ ಗುರುವಾರ ಉಪವಿಭಾಗಾಧಿಕಾರಿ ಎ.ಎನ್.ರಘುನಂದನ್ ಅವರಿಂದ ಅಧಿಕಾರದ ಆದೇಶ ಪತ್ರವನ್ನು ಸ್ವೀಕರಿಸಿದರು.
ನಗರಸಭೆ ವ್ಯಾಪ್ತಿಯಲ್ಲಿರುವ ಹತ್ತಿರದ ಗ್ರಾಮ ಪಂಚಾಯಿತಿಯ ಕೆಲವು ಗ್ರಾಮಗಳು ನಗರ ಯೋಜನಾ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬರುತ್ತಿದೆ. ನಗರಸಭೆಯ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯ ನಡೆಸುವಾಗ ಯೋಜನಾಬದ್ಧವಾಗಿ ನಡೆಸುವ ಜವಾಬ್ದಾರಿ ಪ್ರಾಧಿಕಾರದ ಮೇಲಿದೆ. ಹೊಸ ಯೋಜನೆಗಳು ಮತ್ತು ಕಾಮಗಾರಿ ನಡೆಸುವಾಗ ಕಾನೂನಿನ ಚೌಕಟ್ಟಿನಲ್ಲಿ ಕಟ್ಟುಪಾಡು ಪಾಲಿಸಿ ನಡೆಸುವಂತೆ ನೋಡಿಕೊಳ್ಳುವುದು ಹಾಗೂ ಸಾರ್ವಜನಿಕರಿಗೆ ಮೂಲಸೌಕರ್ಯ ಒದಗಿಸುವ ನಿಟ್ಟಿನಲ್ಲೂ ಪ್ರಾಧಿಕಾರ ಕೆಲಸ ಮಾಡಲಿದೆ. ನಗರಸಭೆ ವ್ಯಾಪ್ತಿಯಲ್ಲದೆ ಹೊರಗಿನ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲೂ ಕ್ರೀಡಾಂಗಣ, ಕೆರೆಗಳ ಅಭಿವೃದ್ಧಿ, ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ , ಸ್ಮಶಾನ, ಪಾರ್ಕ್‌ಗಳು, ವಾಕಿಂಗ್ ಟ್ರ್ಯಾಕ್ ನಿರ್ಮಾಣ ಇತ್ಯಾದಿ ಕೆಲಸಗಳನ್ನು ನಿರ್ವಹಿಸಲು ಅವಕಾಶವಿದೆ. ಈ ಎಲ್ಲ ಜವಾಬ್ದಾರಿಯನ್ನು ಪ್ರಾಮಾಣಿಕತೆಯಿಂದ ನಿರ್ವಹಿಸಲು ಬದ್ಧನಿದ್ದೇನೆ ಎಂದು ಅಧಿಕಾರ ಸ್ವೀಕರಿಸಿ ಅವರು ತಿಳಿಸಿದರು.
ಸಂಸ್ಕಾರ ಭಾರತಿ ತಾಲ್ಲೂಕು ಅಧ್ಯಕ್ಷನಾಗಿ, ಬಿಜೆಪಿ ಪಕ್ಷದ ನಗರ ಘಟಕದ ಹಾಗೂ ಶಿಡ್ಲಘಟ್ಟ ಮಂಡಲ ಅಧ್ಯಕ್ಷನಾಗಿ ಪಕ್ಷಕ್ಕಾಗಿ ದುಡಿದು ಇದೀಗ ಬಿಜೆಪಿ ಜಿಲ್ಲಾ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ನನ್ನ ಕಾರ್ಯವೈಖರಿಯನ್ನು ಗಮನಿಸಿ ಪಕ್ಷ ನೀಡಿರುವ ಈ ಜವಾಬ್ದಾರಿಯನ್ನು ಸಾಮಾಜಿಕ ಕಳಕಳಿಯೊಂದಿಗೆ ನಿರ್ವಹಿಸಿ ಪಕ್ಷಕ್ಕೂ ಮತ್ತು ನಗರದ ಜನರಿಗೂ ಸೇವೆ ಸಲ್ಲಿಸುವುದಾಗಿ ಅವರು ಹೇಳಿದರು.
ಜಿಲ್ಲಾ ಉಪಾಧ್ಯಕ್ಷೆ ಸುಜಾತಮ್ಮ, ದಾಮೋದರ್, ಪೆರೇಸಂದ್ರ ಚನ್ನಕೃಷ್ಣಾರೆಡ್ಡಿ, ದಿಬ್ಬೂರು ಪ್ರಸಾದ್, ಅಗಲಗುರ್ಕಿ ಚಂದ್ರಪ್ಪ, ಮಧುಚಂದ್ರ, ಅಶೋಕ್, ಶ್ರೀನಿವಾಸ್, ಲಕ್ಷ್ಮೀಪತಿ, ರಾಮಣ್ಣ, ಸೀತಬೈರಾರೆಡ್ಡಿ, ನರಸಿಂಹಪ್ಪ ಉಪಸ್ಥಿತರಿದ್ದರು.