ಶಿಡ್ಲಘಟ್ಟ ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಶನಿವಾರ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮ ಹಾಗೂ ಕೋಟ್ಪಾ 2003 ರ ಬಗ್ಗೆ ತಂಬಾಕು ಮಾರಾಟ ಮಾಡುವ ಅಂಗಡಿ ಮಾಲೀಕರಿಗೆ ಆಯೋಜಿಸಲಾಗಿದ್ದ ಒಂದು ದಿನದ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ತಾಲ್ಲೂಕು ಪಂಚಾಯಿತಿ ಇಒ ಚಂದ್ರಕಾಂತ್ ಮಾತನಾಡಿದರು.
ಮುಂಬರುವ ದಿನಗಳಲ್ಲಿ ತಂಬಾಕು ನಿಷೇಧ ಮಾಡುವ ಸಾಧ್ಯತೆಯಿದ್ದು ತಂಬಾಕು ನಿಷೇಧ ಮಾಡಿದ ಮೇಲೆ ಒದ್ದಾಡುವ ಬದಲಿಗೆ ಈಗಿನಿಂದಲೇ ತಂಬಾಕು ಪದಾರ್ಥಗಳ ಮಾರಾಟ ಮಾಡುವುದನ್ನು ಬಿಟ್ಟು ಬೇರೆ ವಸ್ತುಗಳ ಮೇಲೆ ಬಂಡವಾಳ ಹಾಕಿ ವರ್ತಕರು ವ್ಯಾಪಾರ ಮಾಡಲು ಮುಂದಾಗಬೇಕು. ಲಾಭಾಂಶ ಹೆಚ್ಚಿದೆ ಎಂಬ ಕಾರಣಕ್ಕೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವ ವರ್ತಕರು ತಂಬಾಕು ಪದಾರ್ಥಗಳನ್ನು ಮಾರಾಟ ಮಾಡುವುದನ್ನು ಬಿಟ್ಟು ಸಾಮಾಜಿಕ ಕಳಕಳಿ ಮೆರೆಯಬೇಕು ಎಂದು ಅವರು ಹೇಳಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಮಾತನಾಡಿ, ಸಾರ್ವಜನಿಕ ಆರೋಗ್ಯದ ದೊಡ್ಡ ಬೆದರಿಕೆಗಳಲ್ಲಿ ತಂಬಾಕು ಸೇವನೆಯು ಒಂದಾಗಿದೆ. ತಂಬಾಕು ಪದಾರ್ಥಗಳ ಸೇವನೆ ಹಾಗೂ ಧೂಮಪಾನದಿಂದ ವಿಶ್ವದಾದ್ಯಂತ ಲಕ್ಷಾಂತರ ಜನ ಸಾವಿಗೀಡಾಗುತ್ತಿದ್ದಾರೆ. ಸಾಲದ್ದಕ್ಕೆ ಮನೆಯ ದೈನಂದಿನ ಆಹಾರ ಮತ್ತು ಮೂಲಭೂತ ಅಗತ್ಯಗಳಿಗೆ ವೆಚ್ಚಗಳನ್ನು ಮಾಡುವ ಬದಲಾಗಿ ತಂಬಾಕಿಗೆ ಖಚ್ಚು ಮಾಡುವ ಮೂಲಕ ತಂಬಾಕು ಬಳಕೆಯು ಬಡತನಕ್ಕೆ ಕಾರಣವಾಗಿದೆ ಎಂದರು.
ಈಗಾಗಲೇ ತಾಲ್ಲೂಕಿನಾದ್ಯಂತ ಕೋಟ್ಪಾ ಕಾಯಿದೆಯಡಿ ತಂಬಾಕು ಸೇವನೆಯ ಹಾನಿಕಾರಕ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಜೊತೆಗೆ ದೂಮಪಾನ ಮತ್ತು ತಂಬಾಕು ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಹಾಗೂ ಕೋಟ್ಪಾ ಕಾಯ್ದೆಯನ್ನು ಉಲ್ಲಂಘನೆ ಮಾಡದಂತೆ ಸಾರ್ವಜನಿಕರಿಗೆ ಮನವರಿಕೆ ಮಾಡುವ ಕೆಲಸ ಮಾಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಬಿ.ಎಸ್.ರಾಜೀವ್, ರಾಜ್ಯ ತಂಬಾಕು ನಿಯಂತ್ರಣಾಧಿಕಾರಿ ಥಾಮಸ್, ನಗರಸಭೆ ಪೌರಾಯುಕ್ತ ಆರ್.ಶ್ರೀಕಾಂತ್, ಜಿಲ್ಲಾ ತಂಬಾಕು ಆಯೋಜಕ ರಾಘವೇಂದ್ರ, ತಾಲ್ಲೂಕು ಆರೋಗ್ಯ ನಿರೀಕ್ಷಣಾಧಿಕಾರಿ ದೇವರಾಜ್, ಸಿಬ್ಬಂದಿ ಕೀರ್ತಿ, ತಂಬಾಕು ಮಾರಾಟ ಮಾಡುವ ವರ್ತಕರು ಹಾಜರಿದ್ದರು.
Like, Follow, Share ನಮ್ಮ ಶಿಡ್ಲಘಟ್ಟ
Facebook: https://www.facebook.com/sidlaghatta
Instagram: https://www.instagram.com/sidlaghatta
Telegram: https://t.me/Sidlaghatta
Twitter: https://twitter.com/hisidlaghatta
ಸುದ್ದಿಗಳು ಹಾಗೂ ಮಾಹಿತಿಗಾಗಿ ಸಂಪರ್ಕಿಸಿ:
WhatsApp: https://wa.me/917406303366?text=Hi