ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಸಾರ್ವಜನಿಕ ಶಿಕ್ಷಣ ಇಲಾಖೆ ನಗರದ ಸರ್ಕಾರಿ ಪ್ರೌಢಶಾಲೆ ಸಹಯೋಗದಲ್ಲಿ ತಂಬಾಕು ಮತ್ತು ಅದರ ಉತ್ಪನ್ನಗಳ ಸೇವಿಸುವಿಕೆಯಿಂದ ಆಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲು ಗುಲಾಬಿ ಆಂದೋಲನಕ್ಕೆ ವಿವಿಧ ಇಲಾಖೆ ಅಧಿಕಾರಿಗಳು ಗುರುವಾರ ಚಾಲನೆ ನೀಡಿದರು.
ಪ್ರೀತಿ ಮತ್ತು ಗೌರವದ ಸಂಕೇತವಾಗಿರುವ ಗುಲಾಬಿ ಹೂವುಗಳನ್ನು ತಂಬಾಕು ಮಾರಾಟಗಾರರು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವ ವ್ಯಕ್ತಿಗಳಿಗೆ ನೀಡಿ ಅದರ ದುಷ್ಪರಿಣಾಮಗಳನ್ನು ವಿವರಿಸಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಯಿತು. ನಗರದ ಪ್ರಮುಖ ಬೀದಿಗಳಲ್ಲಿ ಜಾಥಾ ಮುಖಾಂತರ ತಂಬಾಕು ಮಾರಾಟ ಮಾಡುವ ಅಂಗಡಿ ಮಾಲಿಕರಿಗೆ ಹಾಗೂ ತಂಬಾಕು ಸೇವನೆ ಮಾಡುವ ವ್ಯಕ್ತಿಗಳಿಗೆ ಗುಲಾಬಿಹೂ ನೀಡುವ ಮೂಲಕ ಅವರಿಗೆ ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿ ಆರೋಗ್ಯ ಶಿಕ್ಷಣ ನೀಡಲಾಯಿತು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ ಆಂಜಿನೇಯುಲು, ಅಧಿಕಾರಿ ನಾರಾಯಣಪ್ಪ, ಶಾಲಾ ಮುಖ್ಯ ಶಿಕ್ಷಕ ರವೀಂದ್ರ, ಆರೋಗ್ಯ ಇಲಾಖೆಯ ದೇವರಾಜ್, ಮುನಿರತ್ನಮ್ಮ, ಲೋಕೇಶ್, ಸುನೀಲ್ ಕುಮಾರ್, ಗೀತಾ ಹಾಗೂ ವಿದ್ಯಾರ್ಥಿಗಳು ಜಾಗೃತಿ ಜಾಥಾದಲ್ಲಿ ಭಾಗವಹಿಸಿದ್ದರು.