Timmanayakanahalli, sidlaghatta : ಶಿಡ್ಲಘಟ್ಟ ತಾಲ್ಲೂಕಿನ ತಿಮ್ಮನಾಯಕನಹಳ್ಳಿ ಗ್ರಾಮದಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿ ಕೊರೆಯದೆ, ಕೊಳವೆ ಬಾವಿ ಕೊರೆದಂತೆ ಕೇಸಿಂಗ್ ಪೈಪ್ ಇಟ್ಟು ಅದರ ಸುತ್ತಲೂ ಮರಳು ರಾಶಿ ಗುಡ್ಡೆ ಮಾಡಿ ವಿದ್ಯುತ್ ಸಂಪರ್ಕ ನೀಡಲಾಗುತ್ತಿದೆ ಎಂದು ಅನುಮಾನ ವ್ಯಕ್ತಪಡಿಸಿ ಗ್ರಾಮಸ್ಥರು ದೂರಿದ್ದಾರೆ.
ತಿಮ್ಮನಾಯಕನಹಳ್ಳಿಯ ರೈತ ನಾರಾಯಣಸ್ವಾಮಿ ಎಂಬುವವರಿಗೆ ಗಂಗಾಕಲ್ಯಾಣ ಯೋಜನೆಯಡಿ ಕೊಳವೆಬಾವಿ ಮಂಜೂರಾಗಿದ್ದು ಕೊಳವೆಬಾವಿ ಕೊರೆಸದೆ ಕೊರೆಸಿದಂತೆ ಸೃಷ್ಟಿಸಿದ್ದಾರೆ. ಅದಕ್ಕೆ ಬೆಸ್ಕಾಂನವರು ವಿದ್ಯುತ್ ಸ್ಥಾವರ(ಟ್ರಾನ್ಸ್ ಫಾರ್ಮರ್) ನಿರ್ಮಿಸಿ ವಿದ್ಯುತ್ ಸಂಪರ್ಕ ನೀಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಗಂಗಾಕಲ್ಯಾಣ ಯೋಜನೆಯ ಕೊಳವೆಬಾವಿ ಕೊರೆಸಲಾಗಿದೆ ಎನ್ನುತ್ತಿರುವ ಜಮೀನಿನ ಪಕ್ಕದಲ್ಲೇ ಸದರಿ ರೈತನ ಇನ್ನೊಂದು ಜಮೀನು ಇದೆ. ಅಲ್ಲಿ ಕೊಳವೆಬಾವಿ ಇದೆ. ಅದಕ್ಕೆ ವಿದ್ಯುತ್ ಸ್ಥಾವರದ ಸಂಪರ್ಕವೂ ಇದೆ. ಮತ್ತೆ ಈ ಗಂಗಾಕಲ್ಯಾಣ ಕೊಳವೆಬಾವಿಗೆ ಸಂಪರ್ಕ ನೀಡುತ್ತಿರುವ ಟ್ರಾನ್ಸ್‌ಫಾರ್ಮರ್ ನ ಸ್ಥಳ ಬದಲಾವಣೆಗಾಗಿ ಗ್ರಾಮ ಪಂಚಾಯಿತಿಗೂ ಮನವಿ ಸಲ್ಲಿಸಲಾಗಿದೆ.
ಇದೆಲ್ಲದರ ಹಿನ್ನಲೆಯಲ್ಲಿ ನಮಗೆ ಕೊಳವೆಬಾವಿ ಕೊರೆಸಿರುವುದೆ ಅನುಮಾನವಾಗಿದ್ದು ಸಂಬಂಧಿಸಿದ ಬೆಸ್ಕಾಂ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಬೇಕು ಎಂದು ಬೆಸ್ಕಾಂನ ಚಿಂತಾಮಣಿ ವಿಭಾಗದ ಇಇ, ಶಿಡ್ಲಘಟ್ಟ ವೃತ್ತದ ಎಇಇ, ದಿಬ್ಬೂರಹಳ್ಳಿ ವಿಭಾಗದ ಎಸ್‌ಒ ಅವರಿಗೆ ಮೊಬೈಲ್ ಕರೆ ಮಾಡಿ ಮನವಿ ಮಾಡಿದ್ದಾರೆ.
ಗಂಗಾಕಲ್ಯಾಣ ಯೋಜನೆಯಡಿ ತಿಮ್ಮನಾಯಕನಹಳ್ಳಿಯ ರೈತ ನಾರಾಯಣಸ್ವಾಮಿಗೆ ಕೊಳವೆಬಾವಿ ಮಂಜೂರು ಆಗಿದ್ದು ಅದಕ್ಕೆ ವಿದ್ಯುತ್ ಸಂಪರ್ಕ ನೀಡುವಂತೆ ಕಳೆದ ಫೆಬ್ರವರಿಯಲ್ಲಿಯೆ ನನಗೆ ಮಂಜೂರಾತಿ ಆದೇಶದ ಕಡತ ಬಂದಿತ್ತು. ಅದರಂತೆ ನಾವು ವಿದ್ಯುತ್ ಸಂಪರ್ಕ ನೀಡುವ ಕೆಲಸ ಮಾಡುತ್ತಿದ್ದೇವೆ.
ಈ ಮದ್ಯೆ ಗ್ರಾಮದ ಕೆಲವರು ಕೊಳವೆಬಾವಿಯೆ ಕೊರೆಸಿಲ್ಲ. ಕೊರೆಸಿದಂತೆ ಸೃಷ್ಟಿಸಿದ್ದು ಈ ಬಗ್ಗೆ ತನಿಖೆ ಮಾಡುವಂತೆ ಮನವಿ ಮಾಡಿದ್ದಾರೆ. ಈ ಬಗ್ಗೆ ನನಗೂ ಹಾಗೂ ಹಿರಿಯ ಅಧಿಕಾರಿಗಳಿಗೂ ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಗ್ರಾಮಸ್ಥರು ದೂರಿರುವ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸೋಮವಾರ ಸ್ಥಳಕ್ಕೆ ಭೇಟಿ ನೀಡಿ ಸತ್ಯಾಸತ್ಯತೆ ಬಗ್ಗೆ ಪರಿಶೀಲಿಸಲಾಗುವುದು.
-ಎಂ.ಮುನಿರಾಜು, ಜೆಇ, ಬೆಸ್ಕಾಂನ ದಿಬ್ಬೂರಹಳ್ಳಿ ವೃತ್ತ