Sidlaghatta : ಇತ್ತೀಚೆಗೆ ನಗರ ಸೇರಿದಂತೆ ತಾಲೂಕಿನಾದ್ಯಂತ ಕಳ್ಳರ ಕಾಟ ಹೆಚ್ಚುತ್ತಿದ್ದು ಒಂಟಿ ಮನೆ, ದೇವಾಲಯ ಸೇರಿದಂತೆ ಮಹಿಳೆಯರನ್ನು ಟಾರ್ಗೆಟ್ ಮಾಡಿರುವ ಕಳ್ಳರ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಜಾಥಾ ಕಾರ್ಯಕ್ರಮ ಪೋಲೀಸ್ ಇಲಾಖೆಯಿಂದ ಹಮ್ಮಿಕೊಳ್ಳಲಾಗಿತ್ತು.
ಮಹಿಳೆಯರು ಚಿನ್ನಾಭರಣಗಳನ್ನು ಧರಿಸಿ ಪ್ರದರ್ಶಿಸಬೇಡಿ, ಕಳ್ಳಕಾಕರು ಯಾವುದೇ ಸಮಯದಲ್ಲಿ ಚಿನ್ನಾಭರಣಗಳನ್ನು ಕಿತ್ತುಕೊಳ್ಳಲು ಅವಕಾಶ ಕೊಡಬೇಡಿ, ಚಿನ್ನಾಭರಣಗಳನ್ನು ಮೈಮೇಲೆ ದರಿಸಿಕೊಂಡಾಗ ಸಂರಕ್ಷಿಸಿಕೊಳ್ಳಿ, ದ್ವಿಚಕ್ರ ವಾಹನ ಅಥವಾ ಕಾರುಗಳನ್ನು ಸುರಕ್ಷಿತ ಸ್ಥಳದಲ್ಲಿ ನಿಲ್ಲಸಿ ಹಾಗೂ ಹ್ಯಾಂಡಲ್ ಲಾಕ್ ಮಾಡಿ ವಾಹನ ಕಳ್ಳತನವನ್ನು ತಡೆಗಟ್ಟಿ. ನಿಮ್ಮ ವಾಹನಗಳನ್ನು ನೀವು ರಕ್ಷಿಸಿಕೊಳ್ಳಿ. ಬ್ಯಾಂಕುಗಳಿಂದ ಹೆಚ್ಚಿನ ಹಣಪಡೆಯಲು ಮತ್ತು ಕಟ್ಟಲು ಅಥವಾ ಎಟಿಎಂನಿಂದ ಹಣ ತೆಗೆಯುವಾಗ ಅಪರಿಚಿತರ ಸಹಾಯವನ್ನು ಪಡೆಯಬೇಡಿ. ನಿಮ್ಮ ಗಮನವನ್ನು ಬೇರೆ ಕಡೆ ಸೆಳೆದು ಬೆಲೆಬಾಳುವ ವಸ್ತುಗಳನ್ನು ತಮಗೆ ಅರಿವಿಲ್ಲದೆ ಕಳ್ಳತನವಾಗುವುದನ್ನು ತಪ್ಪಿಸಿ ಎಂದರು.
ತಮ್ಮಲ್ಲಿರುವ ವಸ್ತುಗಳ ಬಗ್ಗೆ ಎಚ್ಚರ ವಹಿಸಿ. ಗುಮಾನಿ ವ್ಯಕ್ತಿಗಳ ಬಗ್ಗೆ ಹಾಗೂ ಅನುಮಾಸ್ಪದ ವ್ಯಕ್ತಿಗಳ ಬಗ್ಗೆ ಮಾಹಿತಿಯನ್ನು ಪೊಲೀಸ್ ಠಾಣೆಗೆ ನೀಡಿ. ಅಪರಿಚಿತರೊಂದಿಗೆ ವ್ಯವಹರಿಸಬೇಡಿ. ವಿಳಾಸ ಮತ್ತು ಫೋನ್ ನಂಬರನ್ನು ಸಹ ಕೊಡಬೇಡಿ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಅಪ್ರಾಪ್ತ ಮಕ್ಕಳನ್ನು ದುಡಿಮೆಗೆ ತಳ್ಳುವುದು ಹಾಗೂ ಬಾಲ್ಯ ವಿವಾಹದಂತಹ ಅಪರಾಧಗಳನ್ನು ತಡೆಯಲು ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಿ. ಮನೆಗಳ ಹತ್ತಿರ ಬಂದು ಕುಡಿಯುವ ನೀರು, ಕೆಲಸ, ವಿಳಾಸ ಕೇಳುವ ನೆಪದಲ್ಲಿ ಬರುವ ಮತ್ತು ಪೋಲೀಸರ ಸೋಗಿನಲ್ಲಿ ಬರುವ ವ್ಯಕ್ತಿಗಳೊಂದಿಗೆ ಜಾಗರೂಕರಾಗಿರಿ. ಮನೆ ಮತ್ತು ಅಂಗಡಿಗಳಲ್ಲಿ ಹೆಚ್ಚಿನ ಭದ್ರತೆಗಾಗಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಿಕೊಂಡು ಜಾಗೃತರಾಗಿ ಎಂದು ನಗರದ ಪ್ರಮುಖ ಬೀದಿಗಳಲ್ಲಿ ಜಾಥಾ ಮೂಲಕ ಪೊಲೀಸರು ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.