Sidlaghatta : ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸುವ ನಿಟ್ಟಿನಲ್ಲಿ ಅದಕ್ಕೆ ಪೂರಕವಾದ ವಾತಾವರಣ ನಿರ್ಮಾಣ, ಚಟುವಟಿಕೆಗಳನ್ನು ನಡೆಸುವಂತೆ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಬೈಲಾಂಜನಪ್ಪ ಆವರು ಶಾಲಾ ಮುಖ್ಯ ಶಿಕ್ಷಕರಿಗೆ ತಿಳಿಸಿದರು.
ನಗರ ಹೊರವಲಯದ ಹನುಮಂತಪುರ ಗೇಟ್‌ನಲ್ಲಿನ ಬಿಜಿಎಸ್ ಶಾಲೆಯಲ್ಲಿ 2024-25ನೇ ಸಾಲಿನ ಶೈಕ್ಷಣಿಕ ವರ್ಷದ ಆಡಳಿತಾತ್ಮಕ ಮತ್ತು ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ತಾಲ್ಲೂಕಿನ ಎಲ್ಲ ಮುಖ್ಯ ಶಿಕ್ಷಕರ ತರಬೇತಿ ಸಭೆಯಲ್ಲಿ ಮಾತನಾಡಿದರು.
ಸರ್ಕಾರವು ಸರ್ಕಾರಿ ಶಾಲೆಗಳಿಗೆ ನುರಿತ ಶಿಕ್ಷಕರ ನೇಮಕ ಸೇರಿದಂತೆ ಎಲ್ಲ ರೀತಿಯ ಸವಲತ್ತುಗಳನ್ನು ನೀಡುತ್ತಿದ್ದರೂ ಶಾಲೆಗಳಿಗೆ ದಾಖಲಾತಿ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿರುವ ಬಗ್ಗೆ ಶಿಕ್ಷಕರು ಹಾಗೂ ನಾವು ಅಧಿಕಾರಿಗಳು ಚಿಂತನೆ ಮಾಡಿಕೊಳ್ಳಬೇಕೆಂದರು.
ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸಲು ಅಗತ್ಯವಾದ ಎಲ್ಲ ಕ್ರಮಗಳನ್ನೂ ನಾವು ಮಾಡಬೇಕಿದೆ. ಮುಖ್ಯವಾಗಿ ಮಕ್ಕಳ ದಾಖಲಾತಿ ಹೆಚ್ಚುವಂತ ಚಟುವಟಿಕೆಗಳು, ಪೂರಕ ವಾತಾವರಣ ನಿರ್ಮಾಣ ಮಾಡಲು ಅಗತ್ಯವಾದ ಎಲ್ಲ ಕ್ರಮಗಳನ್ನೂ ಕೈಗೊಳ್ಳಲು ಸಿದ್ದರಾಗಿ ಎಂದರು.
ಮೊದಲು ಸರ್ಕಾರಿ ಶಾಲೆಯಲ್ಲಿನ ಸವಲತ್ತು, ಶಿಕ್ಷಣದ ಗುಣಮಟ್ಟ, ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ಪೋಷಕರಿಗೆ ಮನನ ಮಾಡಿಕೊಡುವ ಕೆಲಸ ಆಗಬೇಕು. ಪೋಷಕರಿಗೆ ಈ ಬಗ್ಗೆ ಮನವರಿಕೆ ಆದಾಗ, ನಂಬಿಕೆ ಬಂದಾಗಲೆ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಲ್ಲಿ ಸೇರಿಸುತ್ತಾರೆಯೆ ಹೊರತು ಕೇವಲ ನಮ್ಮ ಮಾತುಗಳಿಗೆ ಭರವಸೆಗಳಿಗೆ ಸೇರಿಸುವುದಿಲ್ಲ ಎಂದು ತಿಳಿಸಿದರು.
ಇದೆಲ್ಲದರ ಜತೆಗೆ ಶಿಕ್ಷಕರು ಈ ವರ್ಷದ ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶದ ಬಗ್ಗೆ ವಿಶ್ಲೇಷಣೆ ಮಾಡಬೇಕಿದೆ ಮತ್ತು ಮುಂದಿನ ವರ್ಷ ಫಲಿತಾಂಶ ಹೆಚ್ಚಲು, ಗುಣಮಟ್ಟದ ಶಿಕ್ಷಣ ನೀಡಲು ಹೆಚ್ಚು ಆಸಕ್ತರಾಗಬೇಕು ಮತ್ತು ಕ್ರೀಯಾಶೀಲರಾಗಬೇಕೆಂದು ಹೇಳಿದರು.
ಪ್ರೌಢಶಾಲೆಗಳಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಬೇಕು ಮತ್ತು ಅದಕ್ಕೆ ಪೂರಕವಾಗಿ ಪ್ರಾಥಮಿಕ ಶಾಲಾ ಹಂತದಲ್ಲೆ ಮಕ್ಕಳನ್ನು ಶೈಕ್ಷಣಿಕವಾಗಿ ಹೆಚ್ಚು ತರಬೇತಿಗೊಳಿಸಬೇಕು. ಕಲಿಯುವ ಪ್ರಕ್ರಿಯೆ ಹೆಚ್ಚಿಸಬೇಕು, ಈ ನಿಟ್ಟಿನಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರು ಹೆಚ್ಚು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕೆಂದು ಕೋರಿದರು.
ಶೈಕ್ಷಣಿಕ ಕ್ರಿಯಾ ಯೋಜನೆ ಪಟ್ಟಿ ತಯಾರಿಕೆ, ಸಮಯ ಪಾಲನೆ, ಮಕ್ಕಳ ಪೋಷಕರೊಂದಿಗೆ ಸಮನ್ವಯತೆ, ಇಲಾಖೆಯ ನೀತಿ ನಿಯಮಗಳ ಪಾಲನೆ, ತರಬೇತಿಗಳು ಇನ್ನಿತರೆ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಿ ಶಾಲಾ ಆರಂಭಕ್ಕೂ ಮುನ್ನಾ ಸಿದ್ದತೆಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಯಿತು.
ಬಿಇಒ ನರೇಂದ್ರಕುಮಾರ್, ಸಮನ್ವಯಾಕಾರಿ ತ್ಯಾಗರಾಜ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಆಂಜನೇಯ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ನಾರಾಯಣಸ್ವಾಮಿ, ಬಿಆರ್‌ಪಿ, ಸಿಆರ್‌ಪಿಗಳು, ಮುಖ್ಯ ಶಿಕ್ಷಕರು ಹಾಜರಿದ್ದರು.