Sidlaghatta : ಶಿಡ್ಲಘಟ್ಟ ನಗರದ ತಾಲ್ಲೂಕು ಪಂಚಾಯಿತಿ (Taluk Panchayat) ಸಭಾಂಗಣದಲ್ಲಿ ತಾಲ್ಲೂಕು ಪಂಚಾಯಿತಿ ಹಾಗೂ ಪರಿಸರ ಭದ್ರತಾ ಪ್ರತಿಷ್ಠಾನ ಸಂಸ್ಥೆಯ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜಲ ಸಂಜೀವಿನಿ ಯೋಜನೆಯ ಕುರಿತು ತರಬೇತಿ ಕಾರ್ಯಾಗಾರದಲ್ಲಿ ನರೇಗಾ (MNREGS) ಸಹಾಯಕ ನಿರ್ದೇಶಕ ಚಂದ್ರಪ್ಪ ಅವರು ಮಾತನಾಡಿದರು.
ನೈಸರ್ಗಿಕ ಸಂಪನ್ಮೂಲ ನಿರ್ವಹಣೆ ಎನ್ನುವುದು ಭೂಮಿ, ನೀರು, ಮಣ್ಣು, ಸಸ್ಯ ಮತ್ತು ಪ್ರಾಣಿಗಳಂತಹ ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆಯಾಗಿದೆ. ನರೇಗಾ ಯೋಜನೆಯಡಿಯಲ್ಲಿ ಎಲ್ಲಾ ನೈಸರ್ಗಿಕ ಸಂಪನ್ಮೂಲ ನಿರ್ವಹಣೆ ಕಾರ್ಯಗಳನ್ನು ಯೋಜಿಸುವಲ್ಲಿ ಜಲಾನಯನ ಆಧಾರಿತ ಮಾದರಿಯನ್ನು ಅಳವಡಿಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಜಿಯೋ-ಸೋಷಿಯಲ್ ತಂತ್ರಜ್ಞಾನಗಳನ್ನು ಬಳಸಿಕೊಂಡು ನೈಸರ್ಗಿಕ ಸಂಪನ್ಮೂಲ ನಿರ್ವಹಣೆ ಕಾಮಗಾರಿಗಳ ಆಯ್ಕೆ ಮತ್ತು ಅನುಷ್ಠಾನದ ಕುರಿತು ತರಬೇತಿ ನೀಡಲಾಗುತ್ತಿದೆ. ಅಂತರ್ಜಲ ಸಂರಕ್ಷಣಾ ಯೋಜನೆಗಳಲ್ಲಿ ಜನರ ಸಹಭಾಗಿತ್ವದ ಮೂಲಕ ಸಮುದಾಯ ಮತ್ತು ವೈಯುಕ್ತಿಕ ಕೆಲಸಗಳಿಗೆ ಕ್ರಿಯಾ ಯೋಜನೆಗಳನ್ನು ರೂಪಿಸುವುದು. ಅರಣ್ಯೀಕರಣ, ಕೃಷಿ ಅರಣ್ಯ ಮತ್ತು ತೋಟಗಾರಿಕೆ ತೋಟಗಳ ಮೂಲಕ ಹಸಿರು ಹೊದಿಕೆ ಪ್ರದೇಶವನ್ನು ಹೆಚ್ಚಿಸುವುದು. ಸಾಗುವಳಿ ಪ್ರದೇಶದಲ್ಲಿ ಮಣ್ಣಿನ ತೇವಾಂಶವನ್ನು ಹೆಚ್ಚಿಸುವುದು ಮತ್ತು ಸವೆತವನ್ನು ನಿಯಂತ್ರಿಸುವ ಮೂಲಕ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವುದೇ ಈ ಯೋಜನೆಯ ಉದ್ದೇಶವಾಗಿದೆ ಎಂದರು.
ಹಸಿರು ಸಂರಕ್ಷಣೆ: ಮರಗಳು ನಮ್ಮ ಪರಿಸರಕ್ಕೆ ಮತ್ತು ಮಾನವ ಸಂಕುಲಕ್ಕೆ ಅಮೂಲ್ಯವಾದ ಕೊಡುಗೆಯನ್ನು ನೀಡುತ್ತಿವೆ. ಜಾಗತಿಕ ಪರಿಸರ ಮತ್ತು ಅಲ್ಲಿ ವಾಸಿಸುವ ಜನರ ಆರೋಗ್ಯಕ್ಕೆ ಮರಗಳು ತುಂಬಾ ಮುಖ್ಯ ಮತ್ತು ಅವುಗಳಿಗೆ ನಮ್ಮ ಬೇಷರತ್ತಾದ ಕಾಳಜಿ ಮತ್ತು ರಕ್ಷಣೆಯ ಅಗತ್ಯವಿದೆ.
ಜಲ ಸಂರಕ್ಷಣೆ: ಒಂದು ಗ್ರಾಮದಲ್ಲಿನ ಜಲಮೂಲಗಳು, ಕುಡಿಯುವ ನೀರಿನ ಲಭ್ಯತೆ, ಮೇಲ್ಮನೀರು ಮತ್ತು ನೀರಾವರಿ ಸೌಲಭ್ಯಗಳು ಅತಿ ಅವಶ್ಯ.
ಮಣ್ಣಿನ ಸಂರಕ್ಷಣೆ: ದೀರ್ಘಾವಧಿಯಲ್ಲಿ ಬೆಳೆಗಳ ಗುಣಮಟ್ಟ ಮತ್ತು ಪ್ರಮಾಣವನ್ನು ಹೆಚ್ಚಿಸುತ್ತದೆ ಎಂದು ಸಾಬೀತಾಗಿದೆ. ಏಕೆಂದರೆ ಅದು ಮೇಲ್ಮಣ್ಣನ್ನು ಅದರ ಸ್ಥಳದಲ್ಲಿ ಇರಿಸುತ್ತದೆ ಮತ್ತು ಮಣ್ಣಿನ ದೀರ್ಘಕಾಲೀನ ಉತ್ಪಾದಕತೆಯನ್ನು ಸಂರಕ್ಷಿಸುವುದರ ಬಗ್ಗೆ ತರಬೇತಿ ನೀಡಲಾಯಿತು.
ನೀರಿನ ಆಯವ್ಯಯ ಸಿದ್ಧಪಡಿಸುವ ಕುರಿತು ಸೇರಿದಂತೆ ಇತರೆ ವಿಷಯಗಳ ಬಗ್ಗೆ ತರಬೇತಿ ನೀಡಲಾಯಿತು. ತರಬೇತಿ ಶಿಬಿರದಲ್ಲಿ ನೊಂದಣಿ ಹಾಗೂ ಜಲ ಸಂಜೀವಿನಿ ಕಾರ್ಯಕ್ರಮದ ಪ್ರಸ್ತಾವನೆಯು ಬಗ್ಗೆ ನರೇಗಾ ಸಹಾಯಕ ನಿರ್ದೇಶಕರವರು ತರಬೇತಿಯಲ್ಲಿ ತಿಳಿಸಿಕೊಟ್ಟರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ತನ್ವಿರ್ ಅಹಮದ್ ಅವರು ಜಿ.ಐ.ಎಸ್. ನಮೂನೆ ಮತ್ತು ಅಂಕಿ ಅಂಶಗಳು, ನೀರು ಆಯವ್ಯಯ ಪ್ರಾತ್ಯಕ್ಷಿಕ ತಯಾರಿಕೆಯ ಬಗ್ಗೆ ತರಬೇತಿ ನೀಡಿದರು. ತರಬೇತಿದಾರರಾದ ಸಂತೋಷ್ ಜಿ.ಐ.ಎಸ್ ಆಧಾರಿತ ವಿವಿಧ ಭೂ ಪಟಗಳ ಸಂಗ್ರಹಣೆ ಮತ್ತು ಕೆ.ಎಂ.ಎಲ್ ಫೈಲ್ ರಚನೆಯ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಯೋಜನಾ ವ್ಯವಸ್ಥಾಪಕ ಎನ್. ರಮೇಶ್, ಜಿಲ್ಲಾ ಸಂಯೋಜಕ ಪ್ರಸನ್ನ ಕುಮಾರ್, ಎಫ್.ಇ.ಎಸ್ ಉತ್ತನ್ನ ಎಂಜಿನಿಯರ್ ಮುನಿರಾಜು, ಕ್ಷೇತ್ರ ಸಂಯೋಜಕರು, ಪಿಡಿಒ ಗಳು, ನಾಗೇಂದ್ರ, ಪ್ರೇಮ್, ಲೋಕೇಶ, ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಜರಿದ್ದರು.