ಶಿಡ್ಲಘಟ್ಟ ತಾಲ್ಲೂಕು ಪಂಚಾಯಿತಿಯಲ್ಲಿ ಮಂಗಳವಾರ ತಂತ್ರಜ್ಞರಿಂದ ಸ್ಯಾನಿಟರಿ ಪ್ಯಾಡ್ ಸುಡುವ ಯಂತ್ರದ ಪ್ರಾತ್ಯಕ್ಷಿಕೆಯನ್ನು ಪ್ರದರ್ಶಿಸಿದ ಸಂದರ್ಬದಲ್ಲಿ ತಾಲ್ಲೂಕು ಪಂಚಾಯಿತಿ ಇಒ ಚಂದ್ರಕಾಂತ್ ಮಾತನಾಡಿದರು.
ತಾಲ್ಲೂಕಿನಾದ್ಯಂತ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹೆಣ್ಣುಮಕ್ಕಳು ಹೆಚ್ಚಾಗಿರುವ ಸ್ಥಳಗಳಲ್ಲಿ ಸ್ಯಾನಿಟರಿ ಪ್ಯಾಡ್ ಸುಡುವ ಯಂತ್ರ ಸ್ಥಾಪಿಸಲಾಗುವುದು. ಈ ಯಂತ್ರ ಕೊಳ್ಳಲೆಂದು ಸರ್ಕಾರದಿಂದ ಎಲ್ಲಾ ಗ್ರಾಮ ಪಂಚಾಯಿತಿಗಳಿಗೂ ಅನುದಾನ ಬಿಡುಗಡೆ ಆಗಿದೆ ಎಂದು ಅವರು ತಿಳಿಸಿದರು.
ಮಹಿಳೆಯರು ಬಳಸುವ ಸ್ಯಾನಿಟರಿ ಪ್ಯಾಡ್‍ಗಳನ್ನು ಕಸದೊಂದಿಗೆ ಎಸೆಯುವುದರಿಂದ ಸಾಕಷ್ಟು ಪರಿಸರ ಹಾನಿಯಾಗುತ್ತಿದೆ. ಅಲ್ಲದೆ ಸಾರ್ವಜನಿಕ ಆರೋಗ್ಯಕ್ಕೆ ಹಾನಿಯಾಗುತ್ತಿದೆ. ಇನ್ನು ಸಾರ್ವಜನಿಕ ಕಟ್ಟಡಗಳಲ್ಲಿ ಶೌಚಾಲಯಕ್ಕೆ ಎಸೆಯುವುದರಿಂದ ತ್ಯಾಜ್ಯ ನೀರು ಹರಿಯುವ ಒಳಚರಂಡಿಗಳು ಕಟ್ಟಿಕೊಳ್ಳುತ್ತವೆ. ಇದರಿಂದಾಗಿ ಸ್ಯಾನಿಟರಿ ಪ್ಯಾಡ್ ಗಳನ್ನು ಸುಡುವ ಇನ್ಸಿನರೇಟರ್ ಯಂತ್ರವನ್ನು ತಾಲ್ಲೂಕಿನ ಹಲವೆಡೆ ಸ್ಥಾಪಿಸಲಾಗುತ್ತಿದೆ ಎಂದರು
ಈ ಯಂತ್ರದೊಳಗೆ ಸ್ಯಾನಿಟರಿ ಪ್ಯಾಡ್‍ಗಳನ್ನು ಹಾಕಿದಾಗ, ಇವು ಸುಟ್ಟು ಭಸ್ಮವಾಗುತ್ತವೆ. ಇದರಿಂದ ವಾಯು ಮಾಲಿನ್ಯವಾಗುವುದಿಲ್ಲ. ವಾಸನೆಯೂ ಬರುವುದಿಲ್ಲ. ಇವುಗಳನ್ನು ಬಳಕೆ ಮಾಡಿಕೊಳ್ಳಬೇಕು. ಇತರೆ ಕಸದೊಂದಿಗೆ ಸ್ಯಾನಿಟರಿ ವೇಸ್ಟ್ ಕೂಡ ಮಿಶ್ರವಾಗುತ್ತಿದೆ. ಇದನ್ನು ವಿಂಗಡಿಸಲಾಗುತ್ತಿಲ್ಲ. ಹೀಗಾಗಿ ಮಹಿಳೆಯರು ಉದ್ಯೋಗ ಮಾಡುವ ಜಾಗದಲ್ಲಿ, ಶಾಲಾ ಕಾಲೇಜುಗಳ ಬಳಿ ಈ ಯಂತ್ರವನ್ನು ಸ್ಥಾಪಿಸಿ, ಇದನ್ನು ಬಳಸುವ ಬಗ್ಗೆ ಅರಿವು ಮೂಡಿಸಿ, ಇದನ್ನು ಬಳಸುವಂತೆ ಮಾಡಲು ಮನವಿ ಮಾಡಲಾಗಿದೆ ಎಂದರು.
ಎಚ್ ಎಲ್ ಎಲ್ ಕಂಪೆನಿಯ ಸಂಪತ್ ಕುಮಾರ್ ಮಾತನಾಡಿ, ಈ ಯಂತ್ರ ವಿದ್ಯುತ್‍ನಿಂದ ಕೆಲಸ ನಿರ್ವಹಿಸುತ್ತದೆ. ಪ್ಯಾಡ್ ಬಳಸಿದ ನಂತರ ಅದನ್ನು ಯಂತ್ರಕ್ಕೆ ಹಾಕುವ 30 ನಿಮಿಷ ಮುನ್ನ ಅದರ ಸ್ವಿಚ್ ಆನ್ ಮಾಡಬೇಕು. ನಂತರ ಪ್ಯಾಡ್‍ಗಳನ್ನು ಅದರೊಳಗೆ ಹಾಕಿ ಬಾಗಿಲು ಮುಚ್ಚಿ ಯಂತ್ರದಲ್ಲಿನ ಕೆಂಪು ಬಟನ್ ಒತ್ತಿದರೆ ಸುಮಾರು 15 ನಿಮಿಷದಲ್ಲಿ ಅದು ಸುಟ್ಟುಹೋಗುತ್ತದೆ. ಅದರ ಹೊಗೆ ಹೋಗಲು ಪ್ರತ್ಯೇಕ ಕೊಳವೆ ಇರುತ್ತದೆ. ಆ ಕೊಳವೆ ಮುಖಾಂತರ ಕೆಟ್ಟ ಹೊಗೆ ಹೊರಹೋಗುತ್ತದೆ. ನಂತರ ಟ್ರೇಯಲ್ಲಿ ಬೂದಿ ಉಳಿಯುತ್ತದೆ. ಆ ಬೂದಿ ಸಹ ಯೋಗ್ಯವಲ್ಲ ಹಾಗಾಗಿ ಅದನ್ನು ಶೌಚಾಲಯ ಅಥವಾ ಕಸದಲ್ಲಿ ಹಾಕಬೇಕು ಎಂದರು.
ಈ ಸಂದರ್ಭದಲ್ಲಿ ಪಿಡಿಒ ಶಾರದಾ, ಜನಾರ್ಧನ್ ಹಾಜರಿದ್ದರು.
Like, Follow, Share ನಮ್ಮ ಶಿಡ್ಲಘಟ್ಟ
Facebook: https://www.facebook.com/sidlaghatta
Instagram: https://www.instagram.com/sidlaghatta
Telegram: https://t.me/Sidlaghatta
Twitter: https://twitter.com/hisidlaghatta
ಸುದ್ದಿಗಳು ಹಾಗೂ ಮಾಹಿತಿಗಾಗಿ ಸಂಪರ್ಕಿಸಿ:
WhatsApp: https://wa.me/917406303366?text=Hi