Sidlaghatta : ಶಿಡ್ಲಘಟ್ಟ : ತಾಲ್ಲೂಕು ಸರ್ಕಾರಿ ನೌಕರರ ಸಂಘದ 2024 -2029ನೇ ಸಾಲಿನ ಅವಧಿಯ ಪದಾಧಿಕಾರಿಗಳ ಸ್ಥಾನಗಳಿಗೆ ಚುನಾವಣೆ ಪ್ರಕ್ರಿಯೆ ಆರಂಭವಾಗಿದೆ.
ನಾಮಪತ್ರ ಸಲ್ಲಿಕೆ ಶುರುವಾಗಿದ್ದು ಒಟ್ಟು 33 ಸ್ಥಾನಗಳಿಗೆ 30 ನಾಮಪತ್ರಗಳು ಸಲ್ಲಿಕೆಯಾಗಿವೆ. ಅ.18 ನಾಮಪತ್ರ ಸಲ್ಲಿಕೆಗೆ ಕಡೆಯ ದಿನ. ಅ.28ರಂದು ಮತದಾನ ನಡೆಯಲಿದ್ದು ಅಂದೆ ಫಲಿತಾಂಶ ಘೋಷಣೆ ಆಗಲಿದೆ.
ಅ.19ರಂದು ನಾಮಪತ್ರ ಪರಿಶೀಲನೆ ಕಾರ್ಯ ನಡೆಯಲಿದ್ದು, 21 ರಂದು ನಾಮಪತ್ರ ವಾಪಸ್ ಪಡೆಯುವ ಪ್ರಕ್ರಿಯೆ ನಡೆಯಲಿದೆ. ಅಂದು ಸಂಜೆ 4 ಗಂಟೆಗೆ ಕಣದಲ್ಲಿ ಉಳಿದ ಅಧಿಕೃತ ಅಭ್ಯರ್ಥಿಗಳು, ಅವಿರೋಧ ಆಯ್ಕೆ ಆಗುವ ಅಭ್ಯರ್ಥಿಗಳ ವಿವರ ಪ್ರಕಟವಾಗಲಿದೆ.
ಅ.28ರಂದು ಸರ್ಕಾರಿ ಪ್ರೌಢಶಾಲೆಯಲ್ಲಿ ಮತದಾನ ನಡೆಯಲಿದ್ದು ಮತದಾನ ಪ್ರಕ್ರಿಯೆ ನಂತರ ಮತ ಎಣಿಕೆ ಕಾರ್ಯ ಆರಂಭಿಸಿ ಫಲಿತಾಂಶ ಘೋಷಣೆಯನ್ನು ಮಾಡಲಾಗುವುದು.
ಕಂದಾಯ ಭವನದಲ್ಲಿನ ಸರ್ಕಾರಿ ನೌಕರರ ಕಾರ್ಯಾಲಯದಲ್ಲಿ ಚುನಾವಣಾ ಪ್ರಕ್ರಿಯೆ ನಡೆಯುತ್ತಿದ್ದು ಚುನಾವಣಾಧಿಕಾರಿಯಾಗಿ ನಿವೃತ್ತ ಶಿಕ್ಷಕ ಬೈರಾರೆಡ್ಡಿ ಅವರು ಕಾರ್ಯನಿರ್ವಹಿಸುತ್ತಿದ್ದಾರೆ.
ಇಲಾಖೆವಾರು ಸ್ಥಾನ ನಿಗಧಿ:
ಕೃಷಿ ಇಲಾಖೆ, ಪಶು ಪಾಲನಾ ಇಲಾಖೆ, ಲೋಕೋಪಯೋಗಿ ಇಲಾಖೆ, ಪಂಚಾಯತ್ ರಾಜ್ ಇಲಾಖೆ, ಪ್ರೌಢಶಾಲೆ ವಿಭಾಗ, ಸಾರ್ವಜನಿಕ ಶಿಕ್ಷಣ ಇಲಾಖೆ, ಪದವಿ ಪೂರ್ವ ಕಾಲೇಜು, ಸಮಾಜ ಕಲ್ಯಾಣ ಇಲಾಖೆ, ಅರಣ್ಯ ಇಲಾಖೆ, ತೋಟಗಾರಿಕೆ ಇಲಾಖೆ, ಖಜಾನೆ, ಭೂ ಮಾಪನ, ನ್ಯಾಯಾಂಗ ಇಲಾಖೆ, ಮಹಿಳಾ ಮತ್ತ ಮಕ್ಕಳ ಕಲ್ಯಾಣ ಇಲಾಖೆ, ಮೀನುಗಾರಿಕೆ/ತೂಕ ಅಳತೆ/ಸಾರಿಗೆ ಇಲಾಖೆ, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ, ನಗರಾಭಿವೃದ್ದಿ ಇಲಾಖೆಗಳಿಗೆ ತಲಾ 1 ಸ್ಥಾನ.
ಕಂದಾಯ ಇಲಾಖೆ, ಗ್ರಾಮೀಣಾಭಿವೃದ್ದಿ ಪಂಚಾಯತ್‌ರಾಜ್ ಇಲಾಖೆ, ಸಹಕಾರ ಲೆಕ್ಕಪರಿಶೋಧನೆ ಇಲಾಖೆಯಿಂದ ತಲಾ 2 ಸ್ಥಾನ. ಪ್ರಾಥಮಿಕ ಶಾಲಾ ವಿಭಾಗ-3, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ-4 ಹಾಗೂ ಇತರೆ ಇಲಾಖೆಗಳಿಂದ 3 ಸ್ಥಾನಗಳಿಗೆ ನಾಮಪತ್ರ ಸಲ್ಲಿಸಬಹುದು.
ಮತದಾರರು
ಪ್ರಾಥಮಿಕ ಶಾಲಾ ವಿಭಾಗದಲ್ಲಿ 583, ಪ್ರೌಢಶಾಲಾ ವಿಭಾಗ-123, ಆರೋಗ್ಯ ಇಲಾಖೆ-87, ಕಂದಾಯ ಇಲಾಖೆ-60, ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಇಲಾಖೆ-52, ಪಶುಪಾಲನಾ ಇಲಾಖೆ-40, ನ್ಯಾಯಾಂಗ ಇಲಾಖೆ-34, ರೇಷ್ಮೆ ಮತ್ತು ತೋಟಗಾರಿಕೆ ಇಲಾಖೆ-34, ಸಮಾಜಕಲ್ಯಾಣ ಇಲಾಖೆ-33 ಮತದಾರರೂ ಸೇರಿದಂತೆ ಎಲ್ಲಾ ಇಲಾಖೆಗಳಿಂದ ಸುಮಾರು 1166 ಮತದಾರರಿದ್ದಾರೆ.
ಅವಿರೋಧ ಆಯ್ಕೆ
ಶಿಡ್ಲಘಟ್ಟ ತಾಲ್ಲೂಕು ಸರ್ಕಾರಿ ನೌಕರರ ಸಂಘದ 33 ಸದಸ್ಯರು/ನಿರ್ದೇಶಕರ ಸ್ಥಾನಗಳಿಗೆ ಇದುವರೆಗೂ 30 ಸ್ಥಾನಗಳಿಗೂ ತಲಾ ಒಬ್ಬೊಬ್ಬರು ಮಾತ್ರವೇ ನಾಮಪತ್ರ ಸಲ್ಲಿಸಿದ್ದಾರೆ. ಪ್ರಾಥಮಿಕ ಶಾಲಾ ಶಿಕ್ಷಕರ ವಿಭಾಗದಿಂದ ಮಾತ್ರ 3 ಸ್ಥಾನಗಳಿಗೆ ನಾಮಪತ್ರ ಸಲ್ಲಿಸುವುದು ಬಾಕಿ ಇದೆ.
ಪ್ರಾಥಮಿಕ ಶಾಲಾ ವಿಭಾಗ ಹೊರತುಪಡಿಸಿ ಇನ್ನುಳಿದ ಎಲ್ಲ ಇಲಾಖೆಗಳಿಂದಲೂ ನಿಗತ ಸಂಖ್ಯೆಯಷ್ಟು ಮಾತ್ರವೇ ನಾಮಪತ್ರ ಸಲ್ಲಿಕೆಯಾಗಿದ್ದು ಅವಿರೋಧ ಆಯ್ಕೆ ಆದಂತಾಗಿದೆ.
ಅ.18ರಂದು ನಾಮಪತ್ರ ಸಲ್ಲಿಕೆಗೆ ಕಡೆಯ ದಿನವಾಗಿದ್ದು ಪ್ರಾಥಮಿಕ ಶಾಲಾ ವಿಭಾಗದಿಂದ ಮೂವರು ಮಾತ್ರ ನಾಮಪತ್ರ ಸಲ್ಲಿಸಿದರೆ ಎಲ್ಲ ಸ್ಥಾನಗಳಿಗೂ ಅವಿರೋಧ ಆಯ್ಕೆ ಆದಂತಾಗುತ್ತದೆ ಇಲ್ಲವಾದರೆ ಪ್ರಾಥಮಿಕ ಶಾಲಾ ವಿಭಾಗದ 3 ಸ್ಥಾನಗಳಿಗೆ ಮಾತ್ರ ಚುನಾವಣೆ ನಡೆಯುವುದು ಅನಿವಾರ್ಯ ಆಗಲಿದೆ.