Sidlaghatta : ರಾಸುಗಳಿಗೆ ಕಾಲ ಕಾಲಕ್ಕೆ ಹಾಕಿಸಬೇಕಾದಂತ ಎಲ್ಲ ರೀತಿಯ ಲಸಿಕೆಗಳನ್ನು ಹಾಕಿಸಿ ಆರೈಕೆ ಮಾಡಬೇಕು. ಇಲಾಖೆಯಿಂದಲೂ ಬಹಳಷ್ಟು ರೀತಿಯ ಲಸಿಕೆಗಳನ್ನು ಉಚಿತವಾಗಿ ನೀಡಲಾಗುತ್ತದೆ, ಇಲಾಖೆಯ ಈ ಯೋಜನೆಯನ್ನು ಎಲ್ಲ ರೈತರು ಉಪಯೋಗಿಸಿಕೊಳ್ಳಬೇಕೆಂದು ಪಶು ಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆ ಸಹಾಯಕ ನಿರ್ದೇಶಕ ಡಾ.ಶ್ರೀನಾಥ್‌ರೆಡ್ಡಿ ರೈತರಲ್ಲಿ ಮನವಿ ಮಾಡಿದರು.
ಪಶುಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆಯಿಂದ ತಾಲ್ಲೂಕಿನಲ್ಲಿ ಹಮ್ಮಿಕೊಂಡಿರುವ ರಾಸುಗಳಿಗೆ ಕಾಲುಬಾಯಿ ರೋಗದ ಸಾಮೂಹಿಕ ಲಸಿಕಾ ಅಭಿಯಾನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಾಮಾನ್ಯವಾಗಿ ಎತ್ತು ಎಮ್ಮೆ ಹೋರಿ ಹಸು ಹಂದಿಗಳಲ್ಲಿ ಕಾಲು ಬಾಯಿ ಜ್ವರು ಕಾಣಿಸಿಕೊಳ್ಳುತ್ತದೆ. ಕಾಲು ಬಾಯಿ ರೋಗ ಕಾಣಿಸಿಕೊಂಡು ನಂತರ ವಾಸಿಯಾದರೂ ಸಹ ಅಂತಹ ರಾಸುಗಳಲ್ಲಿ ಗರ್ಭ ಕಟ್ಟುವುದು ವಿಳಂಬವಾಗುವುದು, ಹಾಲು ಕೊಡುವ ಇಳುವರಿ ಪ್ರಮಾಣ ಕುಸಿಯುವಂತ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
ಇದರಿಂದ ಹೈನುಗಾರಿಕೆ ನಡೆಸುವ ರೈತನಿಗೆ ಆರ್ಥಿಕ ನಷ್ಟ ಉಂಟಾಗುತ್ತದೆ. ಹಾಗಾಗಿ ಕಾಲುಬಾಯಿ ರೋಗ ಕಾಣಿಸಿಕೊಂಡ ಮೇಲೆ ಚಿಕಿತ್ಸೆ ಕೊಡಿಸುವುದಕ್ಕಿಂತಲೂ ರೋಗ ಬಾರದೆ ತಡೆಗಟ್ಟುವುದು ಮುಖ್ಯ. ಅದಕ್ಕಾಗಿ ಕಾಲುಬಾಯಿ ರೋಗ ತಡೆಯುವ ಲಸಿಕೆಯನ್ನು ಹಾಕಿಸುವುದು ಮುಖ್ಯ.
ಇಲಾಖೆಯ ಸಿಬ್ಬಂದಿ ರೈತರ ಮನೆ ಬಾಗಿಲಿಗೆ ಬಂದು ಲಸಿಕೆಯನ್ನು ಹಾಕಲಿದ್ದು ರೈತರೆಲ್ಲರೂ ಎಲ್ಲ ತಪ್ಪದೆ ತಮ್ಮ ರಾಸುಗಳಿಗೆ ಲಸಿಕೆ ಹಾಕಿಸಿ ಸಹಕರಿಸಿ ಎಂದು ಮನವಿ ಮಾಡಿದರು.
ತಾಲ್ಲೂಕಿನ 270 ಗ್ರಾಮಗಳಲ್ಲಿ 28926 ದನಕರುಗಳು, 3536 ಎಮ್ಮೆಗಳಿಗೆ ಕಾಲುಬಾಯಿ ರೋಗದ ಲಸಿಕೆಯನ್ನು ಹಾಕಲಾಗಿದೆ. ಇನ್ನು 5 ಗ್ರಾಮಗಳು ಹಾಗೂ ನಗರ ಪ್ರದೇಶ ಉಳಿದುಕೊಂಡಿದ್ದು ಒಂದೆರಡು ದಿನಗಳಲ್ಲಿ ಎಲ್ಲ ರಾಸುಗಳಿಗೂ ಲಸಿಕೆಯನ್ನು ಹಾಕಲಾಗುವುದು ಎಂದು ವಿವರಿಸಿದರು.