Sidlaghatta : ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕು, ಹಾಗೆಯೆ ಮೂಲ ಸೌಕರ್ಯಗಳನ್ನು ಒದಗಿಸಲು ಸಕಲ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅವರಿಗೆ ತಾಲ್ಲೂಕು ಆಡಳಿತಾಧಿಕಾರಿ ಹಾಗೂ ಜಂಟಿ ಕೃಷಿ ನಿರ್ದೇಶಕಿ ಜಾವಿದಾ ನಸೀಮಾ ಖಾನಂ ಸೂಚಿಸಿದರು.
ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.
ಅಶೋಕ ರಸ್ತೆಯಲ್ಲಿ ಸರ್ಕಾರಿ ಉರ್ದು ಶಾಲೆಯ ಮಕ್ಕಳು ಪ್ಲಾಸ್ಟಿಕ್ ಹೊದಿಕೆಯ ಚಪ್ಪರದ ಕೆಳಗೆ ಪಾಠ ಕೇಳುತ್ತಿದ್ದ ಬಗ್ಗೆ ಪತ್ರಿಕೆಗಳಲ್ಲಿ ಸುದ್ದಿ ಪ್ರಕಟವಾಗಿದ್ದನ್ನು ಪ್ರಸ್ತಾಪಿಸಿ, ಅದರ ಬಗ್ಗೆ ಕೈಗೊಂಡ ಕ್ರಮಗಳ ಬಗ್ಗೆ ಬಿಇಒ ಅವರಿಂದ ಮಾಹಿತಿ ಪಡೆದರು.
ಮದರಸಾ ಕಟ್ಟಡಕ್ಕೆ ಮಕ್ಕಳನ್ನು ಸ್ಥಳಾಂತರಿಸಿದ ಮಾಹಿತಿ ಪಡೆದುಕೊಂಡರು. ತಾಲ್ಲೂಕಿನಲ್ಲಿ ಎಲ್ಲಿಯೂ ಈ ರೀತಿಯ ಸ್ಥಿತಿ ಇರಬಾರದು, ಈ ಬಗ್ಗೆ ಖುದ್ದು ಗಮನವಹಿಸಿ ಕ್ರಮವಹಿಸಬೇಕೆಂದರು.
SSLC ಯ ಅರ್ಧ ವಾರ್ಷಿಕ ಪರೀಕ್ಷೆ ಮುಗಿದಿದ್ದು ಅದರ ಫಲಿತಾಂಶದ ಆಧಾರದಲ್ಲಿ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಗುರ್ತಿಸಿ ಅವರಿಗೆ ಹೆಚ್ಚುವರಿ ಮತ್ತು ಪ್ರತ್ಯೇಕ ಪಾಠ ಪ್ರವಚನ ನಡೆಸಲು ಅಗತ್ಯ ಕ್ರಮ ಕೈಗೊಳ್ಳಿ. ವಸತಿ ನಿಲಯಗಳಲ್ಲಿ ವಿಷಯವಾರು ಶಿಕ್ಷಕರನ್ನು ನೇಮಿಸಿ ಹೆಚ್ಚಿನ ತರಗತಿಗಳನ್ನು ನಡೆಸಲು ಸೂಚಿಸಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ನಿಲಯಗಳಲ್ಲಿ ಮಕ್ಕಳಿಗೆ ಪಠ್ಯೇತರ ಕಲಿಕಾ ಸಾಮಗ್ರಿಗಳನ್ನು ಇನ್ನೂ ವಿತರಿಸದ ಬಗ್ಗೆ ಬೇಸರ ವ್ಯಕ್ತಪಡಿಸಿ ಈ ಬಗ್ಗೆ ಇಲಾಖೆ ಅಧಿಕಾರಿ ಬೀರೇಗೌಡರಿಂದ ಮಾಹಿತಿ ಕೇಳಿದರು.
ಬಿಸಿಎಂ ಇಲಾಖೆ ವಿಸ್ತರಣಾಕಾರಿ ಬೀರೆಗೌಡ ಮಾತನಾಡಿ, ಕಳೆದ ಜೂನ್ ನಲ್ಲೆ ಅಗತ್ಯ ಸಾಮಗ್ರಿಗಳ ಸಂಖ್ಯೆಯ ಪಟ್ಟಿಯನ್ನು ಎಂ.ಎಸ್.ಐ.ಎಲ್.ಗೆ ಕಳುಹಿಸಿದ್ದಾಗಿದೆ. ಇಡೀ ರಾಜ್ಯಕ್ಕೆ ಎಂ.ಎಸ್.ಐ.ಎಲ್.ನಿಂದಲೆ ಸಾಮಗ್ರಿಗಳು ಪೂರೈಕೆ ಆಗಬೇಕಿದ್ದು ತಡವಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಇನ್ನುಳಿದಂತೆ ಎಲ್ಲ ಸವಲತ್ತುಗಳನ್ನು ಒದಗಿಸಲಾಗಿದೆ ಎಂದು ಬೀರೆಗೌಡರ ವಿವರಕ್ಕೆ ಎಂ.ಎಸ್.ಐ.ಎಲ್.ನೊಂದಿಗೆ ಮತ್ತೊಮ್ಮೆ ಪತ್ರ ವ್ಯವಹಾರ ನಡೆಸಿ ಶೀಘ್ರವಾಗಿ ಸಾಮಗ್ರಿಗಳನ್ನು ವಿತರಿಸಲು ಪ್ರಸ್ತಾಪ ಮಾಡಿ ಹಿರಿಯ ಅಧಿಕಾರಿಗಳ ಗಮನಕ್ಕೂ ತನ್ನಿ ಎಂದು ಆಡಳಿತಾಧಿಕಾರಿ ಜಾವಿದ ಖಾನಂ ಸೂಚಿಸಿದರು.
ಮಳೆಯ ಕೊರತೆ ಕಾರಣಕ್ಕೆ ನರೇಗಾ ಕಾಮಗಾರಿಗಳ ಪ್ರಗತಿ ಕುಂಠಿತಗೊಂಡ ಬಗ್ಗೆ ಬೇಸರ ವ್ಯಕ್ತಪಡಿಸಿ ಮಳೆ ಕೊರತೆಯೆ ಅಭಿವೃದ್ದಿ ಕುಂಠಿತಕ್ಕೆ ನೆಪ ಆಗಬಾರದು. ಈ ವರ್ಷದ ಉಳಿದ ದಿನಗಳಲ್ಲಾದರೂ ಗುರಿಯನ್ನು ಮುಟ್ಟುವ ಕೆಲಸ ಆಗಬೇಕೆಂದು ನರೇಗಾ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಎಲ್ಲ ಇಲಾಖೆ ಅಧಿಕಾರಿಗಳಿಗೂ ಸೂಚಿಸಿದರು.
ಕೃಷಿ, ತೋಟಗಾರಿಕೆ, ರೇಷ್ಮೆ, ಬಿಸಿಎಂ, ಸಮಾಜ ಕಲ್ಯಾಣ, ಬೆಸ್ಕಾಂ, ಆರೋಗ್ಯ ಇಲಾಖೆ, ಪಂಚಾಯತ್ ರಾಜ್, ಲೋಕೋಪಯೋಗಿ ಇಲಾಖೆ, ಶಿಕ್ಷಣ ಇಲಾಖೆ, ಅರಣ್ಯ ಇಲಾಖೆ ಸೇರಿ ಎಲ್ಲ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದರು.
ತಾಲ್ಲೂಕು ಪಂಚಾಯಿತಿ ಇಒ ಆರ್.ಹೇಮಾವತಿ, ನರೇಗಾ ಸಹಾಯಕ ನಿರ್ದೇಶಕ ಚಂದ್ರಪ್ಪ, ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.