Taladummanahalli, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ತಲದುಮ್ಮನಹಳ್ಳಿಯಲ್ಲಿ 14 ವರ್ಷಗಳ ನಂತರ ನಡೆಯುತ್ತಿರುವ ಬಂಡಿದ್ಯಾವರ ಉತ್ಸವಕ್ಕೆ ಇಡೀ ಗ್ರಾಮವೇ ಸಿಂಗಾರಗೊಂಡು ಸಜ್ಜಾಗಿತ್ತು. ಶ್ರೀಚೌಡೇಶ್ವರಿ ದೇವಿಯ ಕುಲ ಬಾಂಧವರ ಈ ಉತ್ಸವದಿಂದ ಊರಿಗೆ ಊರೆ ಕಳೆ ಕಟ್ಟಿದೆ.
ಬಂಡಿ ದೇವರ ಉತ್ಸವವು 8 ದಿನಗಳ ಕಾಲ ನಡೆಯಲಿದ್ದು ಪ್ರತಿ ನಿತ್ಯವೂ ಒಂದಲ್ಲ ಒಂದು ಉತ್ಸವ, ಆರಾಧನೆ, ಪೂಜಾ ಕಾರ್ಯಕ್ರಮಗಳು ನಡೆಯಲಿವೆ. ಅಂತಿಮವಾಗಿ ಕಡೆಯ ದಿನ ಮಕ್ಕಳಿಗೆ ಹೂ ಮುಡಿಸುವ ಬಂಡಿ ದ್ಯಾವರ ಆಚರಣೆ ನಡೆಯಲಿದೆ.
ಹಿರಿಯರ ಹೆಸರಲ್ಲಿ ವಸ್ತ್ರಗಳನ್ನಿಟ್ಟು ಪೂಜಿಸುವ ಮೂಲಕ ಬಂಡಿ ದ್ಯಾವರ ಉತ್ಸವ ಆರಂಭವಾಗಿದ್ದು, ಎರಡನೇ ದಿನ ಮಂಗಳವಾರ ಬಲಿ ದ್ಯಾವರ ನಡೆಯಿತು. ಕುಲ ಬಾಂಧವರ ಮನೆಗಳಿಂದ ತಂಬಿಟ್ಟಿನ ದೀಪಗಳನ್ನು ತಲೆ ಮೇಲೆ ಹೊತ್ತು ಊರ ಬೀದಿಗಳಲ್ಲಿ ಸಾಗಿದರು. ಶ್ರೀಚೌಡೇಶ್ವರಿ ದೇವಿಯ ಉತ್ಸವ ಮೂರ್ತಿಯ ಮೆರವಣಿಗೆಯನ್ನು ವೀರಗಾರರು ನಡೆಸಿದರು.
ತಮಟೆ, ನಾದಸ್ವರ, ಡೋಲು ಇನ್ನಿತರೆ ಜನಪದ ವಾದನಗಳು ದೇವಿಯ ಮೆರವಣಿಗೆ, ತಂಬಿಟ್ಟು ದೀಪೋತ್ಸವಕ್ಕೆ ಇನ್ನಷ್ಟು ಮೆರಗು ನೀಡಿತು.
ಊರ ಹೊರವಲಯದಲ್ಲಿನ ಚೌಡೇಶ್ವರಿ ದೇವಿಗೆ ತಂಬಿಟ್ಟಿನ ದೀಪಗಳನ್ನು ಬೆಳಗಿ ಕೈ ಮುಗಿದು ನಮಿಸಿ ಇಷ್ಟಾರ್ಥಗಳು ಈಡೇರಲೆಂದು ಪ್ರಾರ್ಥಿಸಿದರು.
ಮೂರನೇ ದಿನ ಹೊಸಮನೆ ದ್ಯಾವರ, ನಾಲ್ಕನೇ ದಿನ ಗಂಗೆ ದ್ಯಾವರ, ಐದನೇ ದಿನ ಅಶ್ವತ್ಥಕಟ್ಟೆ ನಾಗದೇವರಿಗೆ ಪೂಜೆ, ಆರನೇ ದಿನ ಮನೆ ಮುಂದೆ ಅಡುಗೆ ಮಾಡಿ ಉಣ್ಣುವ ಆಚಾರ, ಏಳನೇ ದಿನ ಬಂಡಿ ಕರಗ ಮಹೋತ್ಸವ ನಡೆದರೆ ಅಂತಿಮವಾಗಿ ಎಂಟನೇ ದಿನ ಮಕ್ಕಳಿಗೆ ಹೂ ಮುಡಿಸುವ ಬಂಡಿ ದ್ಯಾವರ ಆಚರಣೆ ನಡೆಯುತ್ತದೆ.