Sidlaghatta : ಶಿಡ್ಲಘಟ್ಟ ತಾಲ್ಲೂಕಿನಾದ್ಯಂತ ಮತದಾನದ ಬಗ್ಗೆ ಅರಿವು, ಜಾಗೃತಿಯನ್ನು ತಾಲ್ಲೂಕು ಸ್ವೀಪ್ ಸಮಿತಿ ವತಿಯಿಂದ ವಿವಿಧ ರೀತಿಯಲ್ಲಿ ನಡೆಸಲಾಗುತ್ತಿದೆ.
ತಾಲ್ಲೂಕಿನಲ್ಲಿ ಸ್ವೀಪ್ ಸಮಿತಿ ವತಿಯಿಂದ ತಾಲ್ಲೂಕಿನಾದ್ಯಂತ 2024 ರ ಲೋಕಸಭೆಯ ಚುನಾವಣೆಯಲ್ಲಿ ಮತದಾನ ಮಾಡುವ ಬಗ್ಗೆ ರಂಗೋಲಿ ಸ್ಪರ್ಧೆ ಹಾಗೂ ಜಾಥಾ ಮಾಡುವ ಮೂಲಕ ಸಾರ್ವಜನಿಕರಿಗೆ ಚುನಾವಣೆ ಮತದಾನದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಶನಿವಾರ ಮತ್ತು ಭಾನುವಾರ ಹಮ್ಮಿಕೊಳ್ಳಲಾಗಿತ್ತು .
ತಾಲ್ಲೂಕಿನ ಎಲ್ಲ ಗ್ರಾಮ ಪಂಚಾಯತಿಯಲ್ಲೂ ಏಕಕಾಲದಲ್ಲಿ ಗ್ರಾಮ ಪಂಚಾಯಿತಿ ಸಿಬ್ಬಂದಿಯಿಂದ ಜಾಥಾ ಮತ್ತು ಸಾರ್ವಜನಿಕರಿಂದ ಮತದಾನ ಕುರಿತಂತೆ ರಂಗೋಲಿ ಹಾಕಿಸುವ ಮೂಲಕ ಮತದಾನದ ಬಗ್ಗೆ ಅರಿವು ಮತ್ತು ಜಾಗೃತಿ ಮೂಡಿಸಲಾಯಿತು. ಗ್ರಾಮ ಪಂಚಾಯಿತಿ ವತಿಯಿಂದ ಜನರಿಗೆ ಮತದಾನ ಕುರಿತಂತೆ ಪ್ರತಿಜ್ಞಾವಿಧಿಯನ್ನು ಭೋದಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ತಾಲ್ಲೂಕು ಸ್ವೀಪ್ ಸಮಿತಿ ಅಧ್ಯಕ್ಷ ಜಿ.ಮುನಿರಾಜ ಅವರು, “ಚುನಾವಣೆಗಳಲ್ಲಿ ಕಡ್ಡಾಯವಾಗಿ ಭಾಗವಹಿಸಿ ಮತದಾನ ಮಾಡುವ ಮೂಲಕ ಮತ್ತಷ್ಟು ಗಟ್ಟಿಗೊಳಿಸಬೇಕೆಂದು ತಿಳಿಸಿದರು.
ಶಿಡ್ಲಘಟ್ಟ ತಾಲ್ಲೂಕಿನಾದ್ಯಂತ ಇರುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಸಿಬ್ಬಂದಿ ಜೊತೆಗೂಡಿ ಮತದಾನದ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳುತ್ತಲೇ ಇರಬೇಕು. ಜನರಲ್ಲಿ ಜಾಗೃತಿ ಮೂಡಿಸಲು ರಂಗೋಲಿ ಮುಂತಾದ ಚಟುವಟಿಕೆಗಳ ಮೂಲಕ ಪ್ರತಿಯೊಬ್ಬರು ಮತದಾನದಲ್ಲಿ ಭಾಗಿಯಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಿಷ್ಠ ಗೊಳಿಸುವಂತಾಗಬೇಕು ಎಂದರು.
ಸಮಾಜದಲ್ಲಿ18 ವರ್ಷ ಮೇಲ್ಪಟ್ಟ ಯುವಕ, ಯುವತಿಯರು ಕಡ್ಡಾಯವಾಗಿ ತಮ್ಮ ತಮ್ಮ ಹೆಸರುಗಳನ್ನು ಮತದಾರ ಪಟ್ಟಿಯಲ್ಲಿ ನೋಂದಣಿ ಮಾಡಿಸಲು ಆದ್ಯತೆ ನೀಡಬೇಕು. ಸಂವಿಧಾನಾತ್ಮಕವಾಗಿ ದೊರೆತಿರುವ ಹಕ್ಕನ್ನು ಚಲಾಯಿಸಿ ಒಳ್ಳೆಯ ಜನಪ್ರತಿನಿಧಿಗಳನ್ನು ಆರಿಸಿಕೊಳ್ಳಬೇಕೆಂದರು.
ಮತದಾನ ಅಮೂಲ್ಯವಾಗಿದ್ದು ಮತದಾರರು ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೆ ಮತದಾನ ಮಾಡಬೇಕು. ವಿಶೇಷವಾಗಿ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಮತದಾನದ ಪ್ರಮಾಣವನ್ನು ಹೆಚ್ಚಿಸಲು ಜನರಲ್ಲಿ ಅರಿವು ಮತ್ತು ಜಾಗೃತಿ ಮೂಡಿಸಲು ಎಲ್ಲರೂ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಆಯಾ ಗ್ರಾಮ ಪಂಚಾಯಿತಿಗೆ ಸಂಬಂಧಪಟ್ಟ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಸ್ವಸಹಾಯ ಸಂಘದವರು ಹಾಜರಿದ್ದರು.