Sidlaghatta : ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಸಂವಿಧಾನಾತ್ಮಕವಾಗಿ ಲಭಿಸಿರುವ ಮತದಾನದ ಹಕ್ಕನ್ನು ಚಾಚು ತಪ್ಪದೇ ಚಲಾಯಿಸಬೇಕು ಜೊತೆಗೆ ನೆರೆಹೊರೆಯವರು ಸಹ ಮತದಾನ ಮಾಡಲು ಪ್ರೇರೇಪಿಸಬೇಕೆಂದು ಶಿಡ್ಲಘಟ್ಟ ತಾಲ್ಲೂಕು ಸ್ವೀಪ್ ಸಮಿತಿಯ ಅಧ್ಯಕ್ಷ ಜಿ.ಮುನಿರಾಜ ತಿಳಿಸಿದರು.
ನಗರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ತಾಲ್ಲೂಕು ಸ್ವೀಪ್ ಸಮಿತಿ ವತಿಯಿಂದ ನಡೆದ ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿದ ವಿಜೇತರಿಗೆ ಬಹುಮಾನಗಳನ್ನು ವಿತರಿಸಿ ಅವರು ಮಾತನಾಡಿದರು.
ಲೋಕಸಭಾ ಚುನಾವಣೆಯಲ್ಲಿ ಮತದಾನದ ಪ್ರಮಾಣವನ್ನು ಹೆಚ್ಚಳ ಮಾಡುವ ದೃಷ್ಟಿಯಿಂದ ವಿಭಿನ್ನ ರೀತಿಯ ಸ್ವೀಪ್ ಚಟುವಟಿಕೆಗಳನ್ನು ನಡೆಸುತ್ತಿದ್ದೇವೆ. ನಾಗರಿಕರು ಸಹ ಮತದಾನ ಮಾಡುವ ಮೂಲಕ ತಮ್ಮ ಹಕ್ಕು ಚಲಾಯಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸಿ ಉತ್ತಮ ಪ್ರತಿನಿಧಿಯನ್ನು ಆರಿಸಿಕೊಳ್ಳಬೇಕೆಂದು ಮನವಿ ಮಾಡಿದರು.
ತಹಶೀಲ್ದಾರ್ ಬಿ.ಎನ್. ಸ್ವಾಮಿ ಮಾತನಾಡಿ, ಪ್ರಜಾಪ್ರಭುತ್ವದ ಹಬ್ಬ ಆಗಿರುವ ಚುನಾವಣೆಯಲ್ಲಿ ಭಾಗವಹಿಸಿ ಕಡ್ಡಾಯವಾಗಿ ಮತದಾನ ಮಾಡಬೇಕು. ಅದರ ಮೂಲಕ ತಮಗೆ ಇಷ್ಟ ಪಟ್ಟ ಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಬೇಕೆಂದು ಹೇಳಿದರು.
ಮತದಾನದ ಬಗ್ಗೆ ಹಲವರು ಉದಾಸೀನ ಮಾಡುತ್ತಾರೆ. ನಮ್ಮ ಒಂದು ಮತದಾನದಿಂದ ಯಾವ ಬದಲಾವಣೆಯಾಗುತ್ತದೆ ಎಂಬ ತಪ್ಪು ಕಲ್ಪನೆ ಇದೆ. ಕೇವಲ ಒಂದು ಮತಗಳ ಅಂತರದಿಂದ ಅನೇಕ ಸಂಸದರು, ಶಾಸಕರು, ಮತ್ತು ಸ್ಥಳೀಯ ಪ್ರತಿನಿಧಿಗಳು ಸೋಲನ್ನು ಅನುಭವಿಸಿದ್ದಾರೆ. ಇನ್ನೂ ಹೆಚ್ಚಾಗಿ ಸರ್ಕಾರಗಳು ಸಹ ಪತನಗೊಂಡಿರುವ ನಿದರ್ಶನಗಳು ನಮ್ಮ ಕಣ್ಣ ಮುಂದೆ ಇದೆ. ಹೀಗಾಗಿ ಮತದಾನ ಮಾಡಲು ಯಾರೂ ಸಹ ತಾತ್ಸಾರ ಮಾಡಬಾರದು. ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಿ ಪ್ರಜಾಪ್ರಭುತ್ವದ ಹಬ್ಬವನ್ನು ಸಂಭ್ರಮದಿಂದ ಆಚರಿಸಬೇಕೆಂದು ಮನವಿ ಮಾಡಿದರು.
ಸರ್ಕಲ್ ಇನ್ಸ್ ಪೆಕ್ಟರ್ ಶ್ರೀನಿವಾಸ್, ನಗರ ಪೊಲೀಸ್ ಠಾಣೆಯ ಪಿ.ಎಸ್.ಐ ವೇಣುಗೋಪಾಲ್, ಸಿಡಿಪಿಓ ನೌತಾಜ್,ನಗರಸಭೆಯ ಪ್ರಭಾರ ಪೌರಾಯುಕ್ತ ರಘುನಾಥ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಜಗದೀಶ್, ಅಂಗನವಾಡಿ ಕಾರ್ಯಕರ್ತರು, ಮಹಿಳಾ ಸ್ವಸಹಾಯ ಸಂಘದ ಪ್ರತಿನಿಧಿಗಳು ಹಾಜರಿದ್ದರು