Sidlaghatta : ಶಿಡ್ಲಘಟ್ಟ ನಗರದ ಕೋಟೆ ವೃತ್ತದಲ್ಲಿ ತಾಲ್ಲೂಕು ಸ್ವೀಪ್ ಸಮಿತಿ (SVEEP Committee) ವತಿಯಿಂದ ಬುಧವಾರ ಸಂಜೆ ಮೇಣದ ಬತ್ತಿಯನ್ನು ಬೆಳಗುವ ಮೂಲಕ ಮತದಾನದ ಕುರಿತು ಜನಜಾಗೃತಿ ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಿಡ್ಲಘಟ್ಟ ತಾಲ್ಲೂಕು ಸ್ವೀಪ್ ಸಮಿತಿಯ ಅಧ್ಯಕ್ಷ ಹಾಗೂ ತಾ.ಪಂ ಇಒ ಜಿ.ಮುನಿರಾಜ ಅವರು, ಲೋಕಸಭಾ ಚುನಾವಣೆಯಲ್ಲಿ ಮತದಾನದ ಪ್ರಮಾಣವನ್ನು ಹೆಚ್ಚಳ ಮಾಡುವ ದೃಷ್ಟಿಯಿಂದ ವಿಭಿನ್ನ ರೀತಿಯ ಸ್ವೀಪ್ ಚಟುವಟಿಕೆಗಳನ್ನು ನಡೆಸುತ್ತಿದ್ದೇವೆ. ನಾಗರಿಕರು ಸಹ ಮತದಾನ ಮಾಡುವ ಮೂಲಕ ತಮ್ಮ ಹಕ್ಕು ಚಲಾಯಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸಿ ಉತ್ತಮ ಪ್ರತಿನಿಧಿಯನ್ನು ಆರಿಸಿಕೊಳ್ಳಬೇಕೆಂದು ಮನವಿ ಮಾಡಿದರು.
ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಸಂವಿಧಾನಾತ್ಮಕವಾಗಿ ಲಭಿಸಿರುವ ಮತದಾನದ ಹಕ್ಕನ್ನು ಚಾಚು ತಪ್ಪದೇ ಚಲಾಯಿಸಬೇಕು ಜೊತೆಗೆ ನೆರೆಹೊರೆಯವರು ಸಹ ಮತದಾನ ಮಾಡಲು ಪ್ರೇರೇಪಿಸಬೇಕು ಎಂದು ನುಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ನರೇಂದ್ರ ಕುಮಾರ್ ಮಾತನಾಡಿ, ಪ್ರಜಾಪ್ರಭುತ್ವದ ಹಬ್ಬ ಆಗಿರುವ ಚುನಾವಣೆಯಲ್ಲಿ ಭಾಗವಹಿಸಿ ಕಡ್ಡಾಯವಾಗಿ ಮತದಾನ ಮಾಡಬೇಕು. ಅದರ ಮೂಲಕ ತಮಗೆ ಇಷ್ಟ ಪಟ್ಟ ಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಹೇಳಿದರು.
ಮತದಾನ ಮಾಡಲು ಯಾರೂ ಸಹ ತಾತ್ಸಾರ ಮಾಡಬಾರದು. ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಿ ಪ್ರಜಾಪ್ರಭುತ್ವದ ಹಬ್ಬವನ್ನು ಸಂಭ್ರಮದಿಂದ ಆಚರಿಸಬೇಕೆಂದು ಮನವಿ ಮಾಡಿದರು.
ನಗರಸಭೆಯ ಪ್ರಭಾರ ಪೌರಾಯುಕ್ತ ರಘುನಾಥ್, ಶಿಕ್ಷಕರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಹಾಜರಿದ್ದರು