Sugaturu, Sidlaghatta : ವಿದ್ಯಾರ್ಥಿಗಳನ್ನು ತಿದ್ದಿತೀಡುವ ಕಾರ್ಯಕ್ಕಾಗಿ ಶಿಕ್ಷಕರಲ್ಲಿ ತಾಳ್ಮೆ, ಮಕ್ಕಳಾಟಗಳನ್ನೆಲ್ಲಾ ತಡೆದುಕೊಳ್ಳುವ ಮನೋಧರ್ಮ, ಮಾತೃಹೃದಯವಿರಬೇಕು. ಉತ್ತಮ ಪ್ರಜೆಗಳನ್ನು ನಿರ್ಮಾಣ ಮಾಡುವ ಮೂಲಕ ಭವಿಷ್ಯದ ರಾಷ್ಟ್ರನಿರ್ಮಾಣ ಕಾರ್ಯದಲ್ಲಿ ಶಿಕ್ಷಕರದ್ದೇ ಪ್ರಮುಖ ಪಾತ್ರ ಎಂದು ಮುಖ್ಯಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ತಿಳಿಸಿದರು.
ತಾಲ್ಲೂಕಿನ ಸುಗಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಂದರಲಾಲ್ ಬಹುಗುಣ ಇಕೋ ಕ್ಲಬ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಶಿಕ್ಷಕರ ದಿನಾಚರಣೆ, ಎಂಜಿನಿಯರ್ ದಿನ, ಓಜೋನ್ ಸಂರಕ್ಷಣಾ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡು ಮಾತನಾಡಿದರು.
ಉತ್ತಮ ಸಮಾಜವನ್ನು ನಿರ್ಮಿಸಿ, ಸುಸ್ಥಿತಿಯಲ್ಲಿಡಲು ಶಿಕ್ಷಕರ ಕಾರ್ಯವು ಮಹತ್ತರವಾದುದು. ಯುವಪೀಳಿಗೆಯನ್ನು ಜಾಗರೂಕತೆಯಿಂದ ಉಪಯೋಗಿಸಿಕೊಳ್ಳುವ ಕಾರ್ಯವಾಗಬೇಕಿದೆ. ವಿದ್ಯಾರ್ಥಿಗಳು ಶಿಕ್ಷಕರಲ್ಲಿನ ಉತ್ತಮ ನಡಾವಳಿಗಳನ್ನು ಅನುಕರಣೆ ಮಾಡುವಂತಾಗಬೇಕು. ಮಕ್ಕಳಲ್ಲಿ ಕಡಿಮೆಯಾಗುತ್ತಿರುವ ಸಂವಹನಾಕೌಶಲವನ್ನು ವೃದ್ಧಿಸಿಕೊಳ್ಳಲು ಪೂರಕ ಚಟುವಟಿಕೆಗಳನ್ನು ಶಿಕ್ಷಕರು ಯೋಜಿಸಬೇಕು ಎಂದರು.
ಎಂ.ವಿ.ಕೊಡುಗೆ ಅಪಾರ: ಶಿಕ್ಷಕಿ ಎಚ್.ತಾಜೂನ್ ಮಾತನಾಡಿ, ಸ್ವಾತಂತ್ರ್ಯನಂತರದಲ್ಲಿ ಇಡೀ ದೇಶದ ಆರ್ಥಿಕಸುಧಾರಣೆ, ಔದ್ಯೋಗಿಕ ಕ್ಷೇತ್ರಕ್ಕೆ ಸರ್.ಎಂ.ವಿಶ್ವೇಶ್ವರಯ್ಯ ಅವರ ಕೊಡುಗೆ ಅಪಾರವಾದುದು. ಭಾರತಕ್ಕೆ ಪಂಚವಾರ್ಷಿಕಯೋಜನೆಗಳ ಪರಿಕಲ್ಪನೆಯನ್ನು ನೀಡಿ ರಾಷ್ಟ್ರದ ಬಹುತೇಕ ವಿವಿದೋದ್ದೇಶ ಯೋಜನೆಗಳ ಆರಂಭಕ್ಕೆ ಭದ್ರಬುನಾದಿಯನ್ನು ಹಾಕಿದವರು. ನೀರಾವರಿ, ಶಿಕ್ಷಣ, ಬ್ಯಾಂಕಿಂಗ್, ಕೈಗಾರಿಕೆಗಳಿಗೆ ಆದ್ಯತೆನೀಡಿ ರಾಷ್ಟ್ರದ ಅಭಿವೃದ್ಧಿಗೆ ವಿಶ್ವೇಶ್ವರಯ್ಯ ಅವರು ಕಾರಣರಾಗಿದ್ದಾರೆ ಎಂದರು.
ಶಿಕ್ಷಕ ಟಿ.ಎಂ.ಮಧು ಮಾತನಾಡಿ, ಭೂಮಂಡಲವನ್ನು ಆವರಿಸಿ ಭೂಮಿಯನ್ನು, ಜೀವಸಂಕುಲಗಳನ್ನು ನೇರಳಾತೀತ ಕಿರಣಗಳ ಮೂಲಕ ರಕ್ಷಿಸುತ್ತಿರುವ ಓಜೋನ್ ಪದರವನ್ನು ವಾಯುಮಾಲಿನ್ಯದಿಂದ ತಡೆಯುವ ಮೂಲಕ ಸಂರಕ್ಷಿಸುವ ಕರ್ತವ್ಯ ಎಲ್ಲರ ಮೇಲಿದೆ. ಆಧುನಿಕತೆಯ ಹೆಸರಿನಲ್ಲಿ ಆಗುತ್ತಿರುವ ಅಭಿವೃದ್ಧಿಕಾರ್ಯಗಳು ಜಾಗತಿಕ ತಾಪಮಾನ ವೈಪರೀತ್ಯ, ಓಜೋನ್ ಹಾನಿಯಂತಹ ಪರಿಣಾಮಗಳನ್ನು ಉಂಟುಮಾಡುತ್ತಿರುವುದರಿಂದ ಎಚ್ಚರ ವಹಿಸಬೇಕಾದ ಅನಿವಾರ್ಯತೆಯಿದೆ ಎಂದರು.
ಶಿಕ್ಷಕಿ ಎಂ.ಸುನಿತಾ, ಶಿಕ್ಷಕ ಬಿ.ನಾಗರಾಜು, ವಿದ್ಯಾರ್ಥಿನಿ ಎಸ್.ಎಸ್.ಮೊನಿಷಾ ಮಾತನಾಡಿದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ಜಾಗೃತಿ ಗೀತೆಗಳ ಗಾಯನ ನಡೆಯಿತು. ಶಿಕ್ಷಕರನ್ನು ಗೌರವಿಸಲಾಯಿತು. ಓಜೋನ್ ಪದರ ಸಂರಕ್ಷಣೆ ಕುರಿತು ಭಿತ್ತಿಪತ್ರ ತಯಾರಿ ಸ್ಪರ್ಧೆ ನಡೆಸಿ ಬಹುಮಾನಗಳನ್ನು ವಿತರಿಸಲಾಯಿತು.