Sugaturu, Sidlaghatta : ಪರಿಸರ ಸಂರಕ್ಷಣೆ, ವನಮಹೋತ್ಸವದಂತಹ ಕಾರ್ಯಕ್ರಮಗಳು ವರ್ಷದಲ್ಲಿ ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗದೇ ಎಲ್ಲರೂ ಸಸಿನೆಟ್ಟು ಪೋಷಿಸಿ ಪರಿಸರವನ್ನು ಸಂರಕ್ಷಿಸುವ ಕಾರ್ಯವಾಗಬೇಕು, ಎಲ್ಲರಿಗೂ ಪರಿಸರದ ಶಿಕ್ಷಣದ ಅಗತ್ಯವಿದೆ ಎಂದು ಸಿಆರ್‌ಪಿ ಎಂ.ರಮೇಶ್‌ಕುಮಾರ್ ತಿಳಿಸಿದರು.
ತಾಲ್ಲೂಕಿನ ಸುಗಟೂರು ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ವಿಶ್ವಪರಿಸರ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಸಸಿನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮಕ್ಕಳ ಹಕ್ಕು ರಕ್ಷಣೆಯ ಅಗತ್ಯವಿದೆ. ಮಕ್ಕಳಲ್ಲಿ ಆಗಬಹುದಾದ ದೌರ್ಜನ್ಯ, ಲೈಂಗಿಕ ಕಿರುಕುಳದಂತಹ ಪ್ರಕರಣಗಳು ಸಂಭವಿಸದಂತೆ ಕ್ರಮತೆಗೆದುಕೊಳ್ಳುವಲ್ಲಿ ಹೆಣ್ಣುಮಕ್ಕಳು ಮತ್ತು ಪೋಷಕರು ಜಾಗೃತವಾಗಬೇಕು. ಹೆಣ್ಣುಮಕ್ಕಳಿಗೆ ಯಾವುದೇ ತೊಂದರೆಗಳಾದಲ್ಲಿ ತಕ್ಷಣ ಪೋಷಕರು, ಶಿಕ್ಷಕರ ಗಮನಕ್ಕೆ ತರಬೇಕು ಎಂದರು.
ಫೌಂಡೇಶನ್ ಫಾರ್ ಎಕಲಾಜಿಕಲ್ ಸೆಕ್ಯುರಿಟೀಸ್ ಸಂಸ್ಥೆಯ ತಾಲ್ಲೂಕು ಟೀಂ ಕೋಆರ್ಡಿನೇಟರ್ ನಿಕತ್ ಪರ್ವೀನ್ ಮಾತನಾಡಿ, ಸೂಕ್ತ ರೀತಿಯಲ್ಲಿ ಕಸವಿಲೇವಾರಿ, ಪ್ಲಾಸ್ಟಿಕ್ ವರ್ಜನೆ, ಪರಿಸರಸಂರಕ್ಷಣೆ, ಸಸಿನೆಡುವಂತಹ ಯೋಜನೆಗಳಲ್ಲಿ ಸಾರ್ವಜನಿಕರ ಹೊಣೆಗಾರಿಕೆ ವೃದ್ಧಿಯಾಗಬೇಕು. ತಾವು ವಾಸಿಸುವ ಪರಿಸರ, ಗ್ರಾಮ, ತಾಲ್ಲೂಕುಗಳನ್ನು ಸ್ವಚ್ಚ, ಪೂಜ್ಯಸ್ಥಳಗಳನ್ನಾಗಿ ಪರಿವರ್ತಿಸಲು ಸಾಧ್ಯವಿದೆ. ಅಂತಹ ಯೋಜನೆಗಳಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದರು.
ಮುಖ್ಯಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ಮಾತನಾಡಿ, ಹಿಂದಿನ ಜನರಲ್ಲಿ ಪರಿಸರ, ಸಸ್ಯ, ಮರ, ಪ್ರಾಣಿಗಳ ಬಗೆಗೆ ಪೂಜ್ಯನೀಯ ಭಾವನೆಯಿದ್ದಿತು. ಹಿರಿಯರು ಮಳೆಗಾಲ ಆರಂಭವಾಗುತ್ತಿದ್ದಂತೆ ತಮ್ಮ ಜಮೀನುಗಳಲ್ಲಿ ತಪ್ಪದೇ ಮರಗಳನ್ನು ನೆಟ್ಟು ಬೆಳೆಸುತ್ತಿದ್ದರು. ಇಂದು ಪರಿಸರದ ನಾಶದಿಂದ ಎಲ್ಲವೂ ಮಲಿನಗೊಳ್ಳುತ್ತಿವೆ. ಅನೇಕ ಪ್ರಾಣಿ, ಸಸ್ಯ, ಪಕ್ಷಿ ಸಂತತಿಗಳ ಕಣ್ಮರೆಯಾಗುತ್ತಿವೆ. ಮುಂದಿನ ಪೀಳಿಗೆಗೂ ಉತ್ತಮ ಪರಿಸರವನ್ನು ಉಳಿಸಬೇಕಾದ ಕರ್ತವ್ಯ ನಮ್ಮೆಲ್ಲರದ್ದಾಗಬೇಕು.
ಸಿಆರ್‌ಪಿ ಗಳಾದ ಬೆಳ್ಳೂರಪ್ಪ, ಕೃಷ್ಣಪ್ಪ, ಫೌಂಡೇಶನ್ ಫಾರ್ ಎಕಲಾಜಿಕಲ್ ಸೆಕ್ಯುರಿಟೀಸ್ ಸಂಸ್ಥೆಯ ಸೌಭಾಗ್ಯಮ್ಮ, ರಮೇಶ್, ಗೋಪಿ, ನರೇಂದ್ರಕುಮಾರ್, ಗ್ರಾಮಪಂಚಾಯಿತಿ ಮಾಜಿ ಸದಸ್ಯೆ ಭಾಗ್ಯಮ್ಮ ಅರುಣ್‌ಕುಮಾರ್, ಶಿಕ್ಷಕಿ ತಾಜೂನ್, ಶಿಕ್ಷಕ ಟಿ.ಎಂ.ಮಧು, ಎ.ಬಿ.ನಾಗರಾಜ, ಮತ್ತಿತರರು ಹಾಜರಿದ್ದರು.