Sugaturu, Sidlaghatta : ಗ್ರಾಮೀಣ ಮತ್ತು ಬಡ ವಿದ್ಯಾರ್ಥಿಗಳ ಉತ್ತಮ ಶಿಕ್ಷಣಕ್ಕಾಗಿ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದು, ಸಂಘ ಸಂಸ್ಥೆಗಳೂ ಶೈಕ್ಷಣಿಕಾಭಿವೃದ್ಧಿಗೆ ಕೈ ಜೋಡಿಸುತ್ತಿವೆ. ಮಕ್ಕಳ ಗುಣಾತ್ಮಕ ಶಿಕ್ಷಣಕ್ಕಾಗಿ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಅರ್ಹ ವಯಸ್ಸಿನ ಎಲ್ಲಾ ಮಕ್ಕಳೂ ಉಚಿತ ಶಿಕ್ಷಣವನ್ನು ಪ್ರತಿಯೊಬ್ಬರೂ ಪಡೆಯುವಂತಾಗಬೇಕು, ಸರ್ಕಾರಿ ಶಾಲೆಗಳಲ್ಲಿಯೂ ಇಂಗ್ಲೀಷ್ ಮಾಧ್ಯಮ ದ್ವಿಭಾಷಾ ತರಗತಿಗಳನ್ನು ಆರಂಬಿಸಿದ್ದು ಪೋಷಕರು ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಿ ಉತ್ತಮ ಶಿಕ್ಷಣ ಕೊಡಿಸುವತ್ತ ಆದ್ಯತೆ ನೀಡಬೇಕು ಎಂದು ಮುಖ್ಯಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ತಿಳಿಸಿದರು.
ತಾಲ್ಲೂಕಿನ ಸುಗಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ವಿಶೇಷಚೇತನ ಮಕ್ಕಳ ಸಾರಿಗೆ ಮತ್ತು ಬೆಂಗಾವಲು ಭತ್ಯೆ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪೋಷಕರು ಖಾಸಗಿ ಶಾಲೆಗಳ ವ್ಯಾಮೋಹವನ್ನು ಬಿಟ್ಟು ಸರ್ಕಾರಿ ಶಾಲೆಗಳನ್ನು ಉಳಿಸಬೇಕಿದೆ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ, ಹಾಜರಾತಿಯನ್ನು ಹೆಚ್ಚಿಸುವ ಅಗತ್ಯವಿದೆ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳಲ್ಲಿನ ಅಪೌಷ್ಟಿಕತೆ ನೀಗಿಸಲು ಪೂರಕವಾಗಿ ಬಿಸಿಯೂಟ, ಕ್ಷೀರಭಾಗ್ಯ ಯೋಜನೆಯಲ್ಲದೇ ಉಚಿತ ಬೈಸಿಕಲ್, ಪಠ್ಯಪುಸ್ತಕ, ಸಮವಸ್ತ್ರ, ಶೂ ಮತ್ತು ಸಾಕ್ಸ್, ವಿತರಣೆ ಯೋಜನೆ ಅಸ್ತಿತ್ವದಲ್ಲಿವೆ. ಉಪಗ್ರಹಾಧಾರಿತ ಎಜುಸ್ಯಾಟ್, ಬಾನುಲಿ ಕಾರ್ಯಕ್ರಮ, ವಿಶೇಷ ಸಿ.ಡಿ ಮತ್ತು ಡಿ.ವಿ.ಡಿಗಳ ಮೂಲಕ ಬೋಧನೆ, ತಿಂಗಳಿಗೊಮ್ಮೆ ಸಾಂಸ್ಕೃತಿಕ, ಸಹಪಠ್ಯಚಟುವಟಿಕೆಗಳಲ್ಲದೇ ಅನೇಕ ಕಾರ್ಯಕ್ರಮಗಳು ನಡೆಯುತ್ತಿವೆ. ಮಕ್ಕಳ ಉತ್ತಮ ಕಲಿಕೆಯಲ್ಲಿ ಶಾಲಾ ಪರಿಸರ, ಪೋಷಕರ ಜಾಗೃತಿ ಕಾರ್ಯನಿರ್ವಹಿಸಲಿದೆ ಎಂದರು.
ಇಂಗ್ಲೀಷ್ ಮಾಧ್ಯಮ ಆರಂಭ: ಸುಗಟೂರು ಶಾಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನಿಂದಲೇ ಒಂದನೇ ತರಗತಿ ಆಂಗ್ಲಮಾಧ್ಯಮ ವಿಭಾಗವು ಆರಂಭವಾಗಿದ್ದು, ದಾಖಲಾದವರಿಗೆ ಉಚಿತ ಎಲ್ಲಾ ಸೌಲಭ್ಯಗಳನ್ನೂ ಕಲ್ಪಿಸಲಾಗುವುದು. ಮಕ್ಕಳಲ್ಲಿ ಆತ್ಮವಿಶ್ವಾಸ, ಕಲಿಕೆಯಲ್ಲಿ ಶಿಸ್ತು, ಶ್ರದ್ದೆ, ಗುರು ಹಿರಿಯರಲ್ಲಿ ಗೌರವಾದರ ಭಾವನೆಗಳು ಬೆಳೆಯಬೇಕು ಎಂದರು.
ಶಾಸಕ ಮೇಲೂರು ರವಿಕುಮಾರ್ ರವರಸಹಕಾರದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ನೋಟ್‌ಪುಸ್ತಕ ಮತ್ತಿತರ ಲೇಖನಸಾಮಗ್ರಿಗಳನ್ನು ವಿತರಿಸಲಾಯಿತು. ವಿಶೇಷಚೇತನ ಮಕ್ಕಳ ಸಾರಿಗೆ ಮತ್ತು ಬೆಂಗಾವಲು ಭತ್ಯೆ ತಲಾ ಐದೂವರೆ ಸಾವಿರ ರೂಗಳ ಚೆಕ್‌ಗಳನ್ನು ಪೋಷಕರ ಸಮ್ಮುಖದಲ್ಲಿ ವಿತರಿಸಲಾಯಿತು.
ಎಸ್.ಡಿ.ಎಂ.ಸಿ ಅಧ್ಯಕ್ಷ ವೆಂಕಟೇಶ್, ಗ್ರಾಮ ಪಂಚಾಯಿತಿ ಸದಸ್ಯ ನಾರಾಯಣಸ್ವಾಮಿ, ಎಸ್.ಡಿ.ಎಂ.ಸಿ ಸದಸ್ಯೆ ಆರತಿ, ಮಾಜಿ ಸದಸ್ಯರಾದ ಎನ್.ಅಶ್ವತ್ಥಪ್ಪ, ವಿ.ನಾಗರಾಜು, ಸ್ಟುಡಿಯೋ ರವಿಕುಮಾರ್, ಕೆ.ಎಸ್.ಆರ್.ಟಿ.ಸಿ ನೌಕರ ಸಂಜಯ್, ಮಧುಸೂಧನ್, ನಾರಾಯಣಸ್ವಾಮಿ, ವೆಂಕಟರಾಜು, ಎಸ್.ಎಂ.ಮನೋಜ್ ಕುಮಾರ್, ಶಿಕ್ಷಕ ಎ.ಬಿ.ನಾಗರಾಜ, ಟಿ.ಎಂ.ಮಧು, ಬಿ.ನಾಗರಾಜು, ಶಿಕ್ಷಕಿ ತಾಜೂನ್ ಇದ್ದರು.