ಶಿಡ್ಲಘಟ್ಟ ನಗರದ ಸಮತಾ ಸೈನಿಕ ದಳದ ಕಚೇರಿಯಿಂದ ತಾಲ್ಲೂಕು ಕಚೇರಿಯವರೆಗೂ ಬುಧವಾರ ಎಸ್ ಎಸ್ ಡಿ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನಾ ಮೆರವಣಿಗೆಯ ನೇತೃತ್ವ ವಹಿಸಿ ಸಮತಾ ಸೈನಿಕ ದಳದ ತಾಲ್ಲೂಕು ಅಧ್ಯಕ್ಷ ಈಧರೆ ಪ್ರಕಾಶ್ ಮಾತನಾಡಿದರು.
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರ ಭಾವಚಿತ್ರಕ್ಕೆ ರಾಯಚೂರಿನ ನ್ಯಾಯಾದೀಶ ಮಲ್ಲಿಕಾರ್ಜುನಗೌಡ ಮಾಡಿರುವ ಅವಮಾನವನ್ನು ದೇಶದ್ರೋಹ ಕೃತ್ಯ ಎಂದು ಪರಿಗಣಿಸಿ ಸೂಕ್ತ ಕಾನೂನು ಕ್ರಮ ಜರುಗಿಸುವುದು ಮತ್ತು ಸೇವೆಯಿಂದ ಅಮಾನತ್ತು ಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.
ಗಣರಾಜ್ಯೋತ್ಸವ ಅಂಗವಾಗಿ ರಾಜ್ಯದ ರಾಯಚೂರು ಜಿಲ್ಲಾ ಕೋರ್ಟ್ ಆವರಣದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ಸಮರ್ಪಣಾ ದಿನ ಕಾರ್ಯಕ್ರಮದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರವಿದ್ದರೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಹೇಳುವ ಮೂಲಕ ತಮ್ಮ ವೃತ್ತಿ ಗೌರವ ಸೇರಿದಂತೆ ಸಂವಿಧಾನ ಹಾಗೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರಿಗೆ ಅವಮಾನ ಮಾಡಿರುವುದು ಖಂಡನೀಯ. ನ್ಯಾಯಮೂರ್ತಿ ಮಲ್ಲಿಕಾರ್ಜುನಗೌಡ ರಿಗೆ ಈ ದೇಶದ ಸಂವಿಧಾನದ ಬಗ್ಗೆ ಕನಿಷ್ಠ ಅರಿವು, ಸಾಮಾನ್ಯ ಜ್ಞಾನ, ಗೌರವವಿಲ್ಲ ಹಾಗಾಗಿ ಕೂಡಲೇ ಅವರ ಕಾನೂನು ವ್ಯಾಸಂಗದ ಬಗ್ಗೆ ಸೂಕ್ತ ತನಿಖೆ ನಡೆಸುವುದು ಮತ್ತು ಅವರನ್ನು ನ್ಯಾಯಾಧೀಶ ವೃತ್ತಿಯಿಂದ ವಜಾ ಮಾಡಬೇಕು.
ಇದೇ ವಿಷಯವಾಗಿ ಬೀದರ್ ಜಿಲ್ಲೆಯ ಹುಮ್ನಾಬಾದ ತಾಲ್ಲೂಕಿನ ತಹಸೀಲ್ದಾರ್ ರಿಗೆ ಮನವಿ ಸಲ್ಲಿಸಲು ಹೋದಾಗ ಪ್ರತಿಭಟನಾ ನಿರತರನ್ನು ನಿಂದಿಸಿದ ತಹಶೀಲ್ದಾರ್ ಪ್ರದೀಪ್ ಕುಮಾರ್ ಹಿರೇಮಠ್ ರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಗಳಿಗೆ ತಹಶೀಲ್ದಾರ್ ಬಿ.ಎಸ್.ರಾಜೀವ್ ಮುಖಾಂತರ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಮತಾ ಸೈನಿಕ ದಳದ ಮಹಿಳಾ ಘಟಕದ ಅಧ್ಯಕ್ಷೆ ನಾಗರತ್ನಮ್ಮ, ವೆಂಕಟರಾಮಪ್ಪ, ಶರಣ್‌ಕುಮಾರ್, ಕೆ.ಮಂಜುನಾಥ, ಚನ್ನಮ್ಮ, ರೇಣುಕಮ್ಮ ಹಾಜರಿದ್ದರು.