Sidlaghatta : ಶಿಡ್ಲಘಟ್ಟದ ಊರ ದೇವರೆಂದೇ ಖ್ಯಾತವಾದ ನಗರದ ಪುರಾತನ ಶ್ರೀ ವೇಣುಗೋಪಾಲಸ್ವಾಮಿ ದೇವಾಲಯದಲ್ಲಿ ಬ್ರಹ್ಮರಥೋತ್ಸವ ಸಹಿತ ಎಲ್ಲ ಕೈಂಕರ್ಯಗಳು ಪಾಂಚರಾತ್ರಾಗಮ ಪದ್ಧತಿಯಲ್ಲಿ ಸೋಮವಾರ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಶಾಸಕ ಬಿ.ಎನ್.ರವಿಕುಮಾರ್ ಮತ್ತು ತಹಸೀಲ್ದಾರ್ ಬಿ.ಎನ್.ಸ್ವಾಮಿ ರಥೋತ್ಸವಕ್ಕೆ ಚಾಲನೆ ನೀಡಿದರು. ತಮಟೆ ವಾದನ, ಮಂಗಳ ವಾದ್ಯಗಳ ಮಧ್ಯೆ ರಥವನ್ನು ಅಶೋಕ ರಸ್ತೆಯಲ್ಲಿ ಮೆರವಣಿಗೆ ಮಾಡಲಾಯಿತು. ಮಹಿಳೆಯರು ತೆಂಗಿನಕಾಯಿ ಒಡೆದು, ಪೂಜೆ ಸಲ್ಲಿಸಿ, ಆರತಿ ಬೆಳಗಿದರು. ಮಯೂರ ವೃತ್ತದಲ್ಲಿ ಪಾನಕ ಮತ್ತು ಹೆಸರುಬೇಳೆ ಕೋಸಂಬರಿ ಹಂಚಲಾಯಿತು.
ವೇಣುಗೋಪಾಲಸ್ವಾಮಿ ದೇಗುಲದಲ್ಲಿ ಪೂಜಾ ಕಾರ್ಯಕ್ರಮಗಳು ಒಂದು ವಾರದ ಕಾಲ ನಡೆಯಲಿದ್ದು, ನಗರದ ಎಲ್ಲ ಸಮುದಾಯಗಳವರೂ ವಿವಿಧ ಪೂಜಾ ಕೈಂಕರ್ಯಗಳಲ್ಲಿ ಭಾಗಿಯಾಗುವುದು ವಿಶೇಷವಾಗಿದೆ. ನಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.
ಮಾಜಿ ಶಾಸಕ ಎಂ.ರಾಜಣ್ಣ, ಕಾಂಗ್ರೆಸ್ ಮುಖಂಡ ಬಿ.ವಿ.ರಾಜೀವ್‌ಗೌಡ, ಬಿಜೆಪಿ ಮುಖಂಡ ಸೀಕಲ್ ಆನಂದ್‌ಗೌಡ, ಜೆಡಿಎಸ್ ಮುಖಂಡ ಬಂಕ್ ಮುನಿಯಪ್ಪ, ಶ್ರೀ ವೇಣುಗೋಪಾಲಸ್ವಾಮಿ ದೇವಾಲಯ ಅಭಿವೃದ್ದಿ ಸಮಿತಿಯ ರೂಪಸಿ ರಮೇಶ್, ಬಳೆರಘು, ನಗರಸಭೆ ಸದಸ್ಯರಾದ ಎಸ್.ರಾಘವೇಂದ್ರ, ಅರ್ಚಕ ವೈ.ಎನ್. ದಾಶರಥಿಭಟ್ಟಾಚಾರ್ಯ, ಶ್ರೀ ವೇಣುಗೋಪಾಲಸ್ವಾಮಿ ಸೇವಾ ಮತ್ತು ಅಭಿವೃದ್ಧಿ ಟ್ರಸ್ಟ್ ಸದಸ್ಯರು ಹಾಜರಿದ್ದರು.