Sidlaghatta : ಶಿಡ್ಲಘಟ್ಟ ನಗರದ ಮುತ್ತೂರು ಬೀದಿಯಲ್ಲಿರುವ ಕರಗದಮ್ಮದೇವಿ ಕರಗ ಮಹೋತ್ಸವವು ಮಂಗಳವಾರ ರಾತ್ರಿ ವಿಜೃಂಭಣೆಯಿಂದ ನಡೆಯಿತು.
ಶಿರದ ಮೇಲೆ ಕಳಶ ಹೊತ್ತು ಕುಣಿಯುವ ಈ ಕಲೆ ಪ್ರಾಚೀನವಾದದ್ದು. ಕರಗದಾಚರಣೆ ಎಂದರೆ ಆದಿಶಕ್ತಿಯ ಆಚರಣೆ ಎಂದು ನಂಬಲಾಗಿದ್ದು ಆಕೆಯನ್ನು ಕರಗದಮ್ಮ ಎಂದೂ ಕರೆಯಲಾಗುತ್ತದೆ. ಇದನ್ನು ಶಕ್ತಿಯ ಆರಾಧನೆ ಎಂದು ಪರಿಗಣಿಸಿರುವುದು ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಮಾತ್ರ.
ತಮಿಳುನಾಡಿನಿಂದ 14ನೆಯ ಶತಮಾನದಲ್ಲಿ ನಂದಿದುರ್ಗಕ್ಕೆ ಬಂದು ನೆಲೆಸಿದ ರಣಭೈರೇಗೌಡರ ಮೂಲಕ ಈ ಕರಗದ ಕಲೆ ನಮ್ಮ ನಾಡಿಗೆ ಬಂತೆಂದು ನಂಬಲಾಗಿದೆ. ಬೆಂಗಳೂರು ಕಟ್ಟಿದ ಕೆಂಪೇಗೌಡ ಈತನ ವಂಶಸ್ಥನೇ. ಇವರು ಪಾಳೆಪಟ್ಟುಗಳನ್ನು ಕಟ್ಟಿ ಆಳ್ವಿಕೆ ಮಾಡಿರುವ ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಕೋಲಾರ, ಯಲಹಂಕ, ಬೆಂಗಳೂರು, ಆನೇಕಲ್ಲು, ಮಾಗಡಿ ಮುಂತಾದೆಡೆಯೆಲ್ಲ ಈ ಕರಗ ನಡೆಯುವುದು ಇದಕ್ಕೆ ಪೂರಕವಾಗಿದೆ.
ಮಣ್ಣಿನ ಮಡಿಕೆಗೆ ಜಲ ತುಂಬಿಸಲಾಗುತ್ತದೆ. ಆಮೇಲೆ ಅದಕ್ಕೆ ಅರಿಶಿನ, ಕುಂಕುಮ ಹೂಗಳಿಂದ ಅಲಂಕರಿಸಿ ಅದರ ಮೇಲೆ ಗೋಪುರದಂತೆ ಮಲ್ಲಿಗೆ ಹೂವಿನ ಹಾರಗಳನ್ನು ಇಳಿಬಿಡಲಾಗುತ್ತದೆ. ಇದುವೇ ಕರಗ.
ರಾಜೇಂದ್ರ ಅವರು ಕರಗವನ್ನು ಹೊತ್ತಿದ್ದರು. ವೀರಕುಮಾರರು ಅಲಗು ಸೇವೆ ಮಾಡಿದರು. ಹಲಗೆ, ತಮಟೆ ವಾದ್ಯಗಳೊಂದಿಗೆ ಕರಗ ದೇವಾಲಯದ ಪ್ರದಕ್ಷಿಣೆ ಮಾಡಿ ನರ್ತಿಸಿತು. ಮುಂದೆ ಕತ್ತಿ ಹಿಡಿದ ವೀರಕುಮಾರರು, ಹಿಂದೆ ಕುಣಿಯುತ್ತಾ ಕರಗ ರಾತ್ರಿಯಿಡೀ ಊರೆಲ್ಲಾ ಸಂಚರಿಸಿತು. ಪ್ರತಿಯೊಬ್ಬರೂ ತಮ್ಮ ಮನೆಗಳ ಮುಂದೆ ರಂಗೋಲಿ ಹಾಕಿ ಅಲ್ಲಿಗೆ ಕರಗ ಬರುತ್ತಿದ್ದಂತೆ ಭಕ್ತಿಯಿಂದ ಆರತಿ ಬೆಳಗಿ ಮಲ್ಲಿಗೆ ಹೂಗಳನ್ನು ಸಮರ್ಪಿಸಿದರು. ಊರಿನ ಪ್ರಮುಖ ದೇವಾಲಯಗಳಲ್ಲಿ ವಿಶೇಷ ಪೂಜೆ, ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಎಲಾ ಬೀದಿಗಳಲ್ಲೂ ವಿದ್ಯುತ್ ದೀಪಾಲಂಕಾರ ಮಾಡಿದ್ದರು.