Sidlaghatta : ಶಿಡ್ಲಘಟ್ಟ ನಗರದ ಗ್ರಾಮ ದೇವತೆ ಶ್ರೀಗಂಗಮ್ಮ ದೇವಿ ದೇವಾಲಯದ ಶ್ರೀದ್ರೌಪದಮ್ಮ ದೇವಿಯ ಐದನೇ ವರ್ಷದ ಹೂವಿನ ಕರಗ ಮಹೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದಲೂ ಶ್ರದ್ಧಾ ಭಕ್ತಿಯಿಂದಲೂ ಶುಕ್ರವಾರ ರಾತ್ರಿ ನೆರವೇರಿತು.
ನಗರ ಸೇರಿದಂತೆ ಸುತ್ತ ಮುತ್ತಲ ಗ್ರಾಮಗಳಿಂದ ಆಗಮಿಸಿದ್ದ ನೂರಾರು ಭಕ್ತರು ಹೂವಿನ ಕರಗ ಮಹೋತ್ಸವಕ್ಕೆ ಸಾಕ್ಷಿಯಾದರು.
ಮುಳಬಾಗಿಲು ನಾಗರಾಜ್ ಅವರು ಹೂವಿನ ಕರಗ ಹೊತ್ತು ಭಕ್ತಿಭಾವದಿಂದ ಕುಣಿಯುತ್ತಿದ್ದರೆ ನೆರೆದಿದ್ದ ಭಕ್ತರು ನಿಂತಲ್ಲೆ ಕುಣಿದು ಕುಪ್ಪಳಿಸಿದರು. ಭಕ್ತಿಭಾವದ ಪರವಶದಲ್ಲಿ ಮಿಂದೆದ್ದರು.
ತಮಟೆಯ ಏಟು, ಹಾಡು, ಸಂಗೀತದ ಲಯಕ್ಕೆ ತಕ್ಕಂತೆ ತಲೆ ಮೇಲೆ ಕರಗ ಹೊತ್ತಿದ್ದ ನಾಗರಾಜ್ ಕುಣಿಯುತ್ತಿದ್ದರೆ ಕರಗದ ನೃತ್ಯ ನೋಡಲು ಬಂದಿದ್ದವರು ಕರಗದ ನೃತ್ಯವನ್ನು ಕಣ್ತುಂಬಿಕೊಂಡರು.
ಇದಕ್ಕೂ ಮೊದಲು ಶ್ರೀಗಂಗಮ್ಮ ದೇವಾಲಯದಲ್ಲಿ ಶ್ರೀಗಂಗಮ್ಮ, ದ್ರೌಪದಮ್ಮ ದೇವಿಗೆ ವಿಶೇಷ ಹೂವಿನ ಅಲಂಕಾರ ಮಾಡಿ ಪೂಜೆ ನೆರವೇರಿಸಿ ಮಹಾ ಮಂಗಳಾರತಿ ಮಾಡಿ ತೀರ್ಥ ಪ್ರಸಾದವನ್ನು ವಿನಿಯೋಗಿಸಲಾಯಿತು.
ದೇವಾಲಯದಿಂದ ಹೊರ ಬಂದ ಕರಗವನ್ನು ನೆರೆದ ಭಕ್ತರು ಕಣ್ತುಂಬಿಕೊಂಡರಲ್ಲದೆ ಮೊಬೈಲ್‌ಗಳಲ್ಲಿ ಸೆರೆ ಹಿಡಿದುಕೊಂಡು ಸಂಭ್ರಮಿಸಿದರು.
ಹೂವಿನ ಕರಗ ಮಹೋತ್ಸವ ಅಂಗವಾಗಿ ಹೂವಿನ ವೃತ್ತದಲ್ಲಿ ರಸ ಮಂಜರಿ ಕಾರ್ಯಕ್ರಮ ಏರ್ಪಡಿಸಿದ್ದು ಕನ್ನಡ ತೆಲುಗು ಹಿಂದಿ ಹಾಡುಗಳ ಗಾಯನ ಮತ್ತು ನೃತ್ಯವು ಕಲಾ ರಸಿಕರ ಮನ ರಂಜಿಸಿತು.